ಮನೋವಿಜ್ಞಾನ -
ಮಾನವ ವರ್ತನೆಯ ವಿವಿಧ ಮುಖಗಳ ಶಾಸ್ತ್ರೀಯ ಅಧ್ಯಯನ (ಸೈಕಾಲಜಿ) ಆಧ್ಯಾತ್ಮಕಶಾಸ್ತ್ರ, ತತ್ತ್ವಶಾಸ್ತ್ರಗಳು ಅಧ್ಯಯನಕ್ಕೆ ಬಳಸುವ ವಿಧಾನಗಳನ್ನು ಬದಿಗೊತ್ತಿ ಭೌತವಿಜ್ಞಾನ, ಪ್ರಕೃತಿವಿಜ್ಞಾನಗಳು ಬಳಸುವ 'ವೈಜ್ಞಾನಿಕ ವಿಧಾನಗಳು ಎಂದು ಕರೆಯಲಾಗುತ್ತಿರುವ ವಿಧಾನಗಳಿಗೆ ಪ್ರಾಧಾನ್ಯ ನೀಡುವ ಈ ವಿಜ್ಞಾನ ಜನಿಸಿದ್ದು ವಿಲ್‍ಹೆಲ್ಮ್ ವೂಂಟ್ (1832-1920) ಸ್ಥಾಪಿಸಿದ ಮನೋವೈಜ್ಞಾನಿಕ ಅಧ್ಯಯನಗಳಿಗಾಗಿ ಮೀಸಲಾದ ಲಿಪ್‍ಜಿಗ್ ವಿಶ್ವವಿದ್ಯಾಲಯದ ಪ್ರಯೋಗ ಶಾಲೆಯಲ್ಲಿ (1879). ಇಂಥದೊಂದು ಹೂಸವಿಜ್ಞಾನ ಮೂಡಿ ಬರುವ ಸಾಧ್ಯತೆಯನ್ನು ಮೇಯಿಸ್ ಡಿ ಬೈರಾನ್‍ನ ಎಸ್ಸೈ ಸರ್‍ಲೆಸ್ ಫಂಡಮೆಂಟ್ಸ್ ದ ಲ ಸೈಕಾಲಜಿ(1812) ಯೊಹಾನ್ ಫ್ರೆಡ್ರಿಕ್ ಹರ್ಬಟನ (1776-1841) ಟೆಕ್ಸ್ಟ್ ಬುಕ್ ಆಫ್ ಸೈಕಾಲಜಿ (1816) ಮತ್ತು ಸೈಕಾಲಜಿ ಆಸ್ ಸೈನ್ಸ್(1824-25) ಎಂಬ ಪುಸ್ತಕಗಳು ಮುಂದಾಗಿಯೇ ಸೂಚಿಸಿದ್ದವು. 1881ರಲ್ಲಿ ವೂಂಟ್‍ನ ನೇತೃತ್ವದಲ್ಲಿ ಪ್ರಕಟಗೊಳ್ಳಲಾರಂಭಿಸಿದ ಜರ್ನಲ್ ಆಫ್ ಎಕ್ಸ್‍ಪೆರಿಮೆಂಟಲ್ ಸೈಕಾಲಜಿ, ಜಿ. ಸ್ಟಾನ್ಲಿ ಹಾಲ್ ನ (1844-1924) ನೇತೃತ್ವದಲ್ಲಿ ಉತ್ತರ ಅಮೆರಿಕದಲ್ಲಿ ಸ್ಥಾಪಿತವಾದ ಮನೋವಿಜ್ಞಾನ ಪ್ರಯೋಗಶಾಲೆ ಮತ್ತು 1892ರಲ್ಲಿ ಅಸ್ತಿತ್ವಕ್ಕೆ ಬಂದ ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್, ಜೀನ್ ಮಾರ್ಟಿನ್ ಚೌರ್ಕಾಟ್‍ನ (1825-93) ಅಧ್ಯಕ್ಷತೆಯಲ್ಲಿ 1889 ರಲ್ಲಿ ಪ್ಯಾರಿಸ್‍ನಲ್ಲಿ ನಡೆದ ಮನೋವಿಜ್ಞಾನದ ಪ್ರಥಮ ಅಂತಾರಾಷ್ಟ್ರಿಯ ಸಮ್ಮೇಳನ ಮನೋವಿಜ್ಞಾನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆಯಲು ನೆರವಾದವು. ಅರ್ಥಾತ್ ಆಧುನಿಕ ಮನೋವಿಜ್ಞಾನಕ್ಕೆ ತನ್ನದೇ ಆದ ಸುಮಾರು 100 ವರ್ಷಗಳ ಇತಿಹಾಸ ಮಾತ್ರ ಇದೆ. ಈ 100 ವರ್ಷಗಳಲ್ಲಿ ಮನೋವಿಜ್ಞಾನ ಎಂದರೇನು? ಎಂಬ ಪ್ರಶ್ನೆಗೆ ಮನೋವಿಜ್ಞಾನಿಗಳು ನೀಡಿರುವ ಉತ್ತರಗಳು ಅದರ ಇತಿಹಾಸದ ಸೂಕ್ಷ್ಮ ಚಿತ್ರವನ್ನು ಒದಗಿಸುವುವಲ್ಲದೆ, ಅದರ ಭ್ರೂಣಾವಸ್ಥೆಯ ಇತಿಹಾಸ ಶೋಧನೆಗೆ ಸಹಾಯವನ್ನು ಮಾಡುತ್ತವೆ. 

ಸಿದ್ಧ್ದಾಂತ : ಮಾನವನ ವರ್ತನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಜ್ಞಾನ ಶಾಖೆ ಎಂಬುದು ಮನೋವಿಜ್ಞಾನದ ಪ್ರಚಲಿತ ವ್ಯಾಖ್ಯಾನ. ಈ ಶತಮಾನದ ಆದಿಯಲ್ಲಿ ಕಲಿತ ಅಥವಾ ಕಲಿಯದೆ ಬಂದ ವರ್ತನೆಯನ್ನು ತನ್ನ ಅಧ್ಯಯನ ವಸ್ತುವಾಗಿ ಹೊಂದಿರುವ ಪ್ರಾಕೃತಿಕ ವಿಜ್ಞಾನದ (ನ್ಯಾಚುರಲ್ ಸೈನ್ಸ್) ವಿಭಾಗ ಎಂಬ ನಿರೂಪಣೆಯ ಸಂಕ್ಷಿಪ್ತ ರೂಪದಂತೆ ಇದು ಕಂಡುಬಂದರೂ ಕೂಡ 'ವರ್ತನೆ` ಅನ್ನುವ ಪದದ ಅರ್ಥವ್ಯಾಪ್ತಿ ಅಂದಿಗಿಂತ ಇಂದು ವಿಸ್ತಾರವಾಗಿದೆ. 'ಜೀವಿಗಳು ತಮ್ಮ ಬಾಹ್ಯ ಜಗತ್ತನ್ನು ಸ್ಪರ್ಶಿಸುವಾಗ ಕಾಣುವ ವರ್ತನೆಯ ಅರ್ಥಾತ್ ವೀಕ್ಷಣೀಯ ವರ್ತನೆಯ ಅಧ್ಯಯನಕ್ಕೆ ಸೀಮಿತಗೊಂಡಿದ್ದ ಮನೋವಿಜ್ಞಾನ ಇಂದು 'ಅಲೋಚಿಸುವಿಕೆಯಂಥ ವ್ಯಕ್ತಿನಿಷ್ಠ ಖಾಸಗಿ ಪ್ರಕ್ರಿಯೆಗಳನ್ನು ಆಂತರಿಕ ವರ್ತನೆ` ಎಂಬ ಹೆಸರಿನಿಂದ ಅಭ್ಯಸಿಸುತ್ತದೆ. ಹಾವಭಾವಗಳು, ಮಾತು, ಶರೀರಕ್ರಿಯೆಯ ಬದಲಾವಣೆಗಳು ಮುಂತಾದ ವೀಕ್ಷಣೀಯ ವರ್ತನ ಪ್ರಕ್ರಿಯೆಗಳು ಮತ್ತು ಆಲೋಚನೆಗಳು, ಕನಸುಗಳು ಮುಂತಾದ ಅನಿಯಮಿತ ಪ್ರಕ್ರಿಯೆಗಳು ಇಂದಿನ ಮನೋವಿಜ್ಞಾನದ ಅಧ್ಯಯನ ವಸ್ತುಗಳಾಗಿವೆ. ಮನೋವಿಜ್ಞಾನವನ್ನು ವಸ್ತುನಿಷ್ಠ ಪ್ರಾಯೋಗಿಕ ವಿಜ್ಞಾನಗಳ ಸಾಲಿನಲ್ಲಿ ನಿಲ್ಲಿಸಲು ಕಳೆದ 100 ವರ್ಷಗಳಲ್ಲಿ ನಡೆದ ಯತ್ನಗಳ ಫಲವಾಗಿ 'ಮಾನಸಿಕ ಜೀವನದ ವಿಜ್ಞಾನವೇ ಮನೋವಿಜ್ಞಾನ. `ಎಲ್ಲೆಡೆ ಇರುವ ಪ್ರಜ್ಞೆ (ಕಾನ್‍ಶಿಯಸ್‍ನೆಸ್), ಪ್ರಸಾಮಾನ್ಯ ಅಥವಾ ಅಪ್ರಸಾಮಾನ್ಯ ಪ್ರಜ್ಞೆ, ಮಾನವನಲ್ಲಿ ಅಥವಾ ಪ್ರಾಣಿಯಲ್ಲಿ ಇರುವ ಪ್ರಜ್ಞೆ ಮನೋವಿಜ್ಞಾನ ವಿವರಿಸಲು ಯತ್ನಿಸುವ ವಸ್ತು ಎಂಬ ಮತ್ತು ತತ್ಸಂಬಂಧ ವ್ಯಾಖ್ಯಾನಗಳು ಮಾನ್ಯತೆ ಕಳೆದುಕೊಂಡವು. ವರ್ತನೆ ಅನ್ನುವ ಪದಕ್ಕೆ ವಿಶಾಲವಾದ ಅರ್ಥವ್ಯಾಪ್ತಿ ನೀಡಬಹುದಾದರೆ, `ಜೀವಿಗಳ ವರ್ತನೆಯನ್ನು ವಿವರಿಸಬಲ್ಲ ಸಾರ್ವತ್ರಿಕ ನಿಯಮಗಳ ಅನ್ವೇಷಣೆಯೇ ಮನೋವಿಜ್ಞಾನ.

ಇಂದು ಮನೋವಿಜ್ಞಾನಿಗಳು ಎಂದು ತಮ್ಮನ್ನು ಕರೆದುಕೊಳ್ಳುತ್ತಿರುವವರು ಏನು ಮಾಡುತ್ತಿದ್ದಾರೆ ಎಂಬುದರ ಸರ್ವೇಕ್ಷಣೆ. ಮನೋವಿಜ್ಞಾನದ ಕಾರ್ಯಕ್ಷೇತ್ರದ ವಿಶಾಲತೆಯ ಅರಿವು ಮೂಡಿಸಲು ಮತ್ತು ಪ್ರಾಚೀನ ಕಾಲದಲ್ಲಿ ಮನೋವಿಜ್ಞಾನದ ಮೂಲ ಶೋಧಿಸಲು ಸಹಾಯಕ. ಸಂವೇದನೋದ್ದೀಪನೆಗಳಿಗೆ ವ್ಯಕ್ತಿ ಹೇಗೆ ಪ್ರತಿಕ್ರಯಿಸುತ್ತಾನೆ? ಸುತ್ತಲಿನ ಜಗತ್ತನ್ನು ಹೇಗೆ ಅರ್ಥವಿಸುತ್ತಾನೆ? ಹೇಗೆ ಕಲಿಯುತ್ತಾನೆ? ಕಲಿತದ್ದನ್ನು ಹೇಗೆ ಜ್ಞಾಪಿಸಿಕೊಳ್ಳುತ್ತಾನೆ? ಹೇಗೆ ಪ್ರೇರೇಪಿಸಲ್ಪಡುತ್ತಾನೆ? ಇಂಥ ಪ್ರಶ್ನೆಗಳನ್ನು ಉತ್ತರಿಸಲು ಪ್ರಯೋಗ ವಿಧಾನಗಳನ್ನು ಮನೋವಿಜ್ಞಾನಿ ಬಳಸುತ್ತಾನೆ (ಪ್ರಾಯೋಗಿಕ ಮನೋವಿಜ್ಞಾನ). ಇವರಲ್ಲಿ ಕೆಲವರು ಪ್ರಾಣಿವರ್ತನೆಯನ್ನು ವಿವರಿಸಲು, ವಿವಿಧ ಪ್ರಾಣಿವಂಶಗಳ ವರ್ತನೆಯನ್ನು ವಿವರಿಸಲು, ವಿವಿಧ ಪ್ರಾಣಿವಂಶಗಳ ವರ್ತನೆಯನ್ನು ಹೋಲಿಸಲು (ತೌಲನಿಕ ಮನೋವಿಜ್ಞಾನ) ಪ್ರಯತ್ನಿಸುತ್ತಾರೆ. ಇವರೆಲ್ಲರೂ ವರ್ತನೆಯ ಘಟಕಗಳನ್ನು ನಿಖರವಾಗಿ ಅಳತೆಮಾಡಬಲ್ಲ, ನಿಯಂತ್ರಿಸಬಲ್ಲ ವಿಧಾನಗಳನ್ನು ರೂಪಿಸಲು ಪ್ರಯತ್ನಿಸುತ್ತಾರೆ. ಲೈಂಗಿಕ ಹಾರ್ಮೊನುಗಳ ವರ್ತನೆಯನ್ನು ಹೇಗೆ ನಿಯಂತ್ರಿಸುತ್ತವೆ? ಮಾತನ್ನು ಮಿದುಳಿನ ಯಾವ ಭಾಗ ಹೇಗೆ ನಿಯಂತ್ರಿಸುತ್ತದೆ? ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತಾನೆ ಶರೀರಕ್ರಿಯಾಮನೋವಿಜ್ಞಾನಿ (ಫಿಸಿಯಲಾಜಿಕಲ್ ಸೈಕಾಲಜಿಸ್ಟ್). ಅರ್ಥಾತ್, ಇವರು ನರಜೀವ ವೈಜ್ಞಾನಿಕ ದೃಷ್ಟಿಕೋನದಿಂದ ಮನುಷ್ಯನನ್ನು ಅಧ್ಯಯನ ಮಾಡಿ ದೈಹಿಕ ಪ್ರಕ್ರಿಯೆಗಳಿಗೂ ವರ್ತನೆಗೂ ನಡುವೆ ಇರಬಹುದಾದ ಸಂಬಂಧ ಪತ್ತೆಹಚ್ಚಲು ಪ್ರಯತ್ನಿಸುತ್ತಾರೆ. ವಿಕಾಸ ಮನೋವಿಜ್ಞಾನಿ ಮಾನವನ ಬೆಳವಣಿಗೆಯನ್ನೂ ಜೀವನದ ವಿವಿಧ ಹಂತಗಳಲ್ಲಿ ಈತನ ವರ್ತನೆಯನ್ನು ರೂಪಿಸುವ ಕಾರಕಗಳನ್ನೂ ಅಧ್ಯಯನ ಮಾಡುತ್ತಾನೆ. ಸಮೂಹ ವರ್ತನೆ, ವ್ಯಕ್ತಿಗಳ ನಡುವಿನ ಅನ್ಯೋನ್ಯ ಕ್ರಿಯೆ ಮನೋಧೋರಣೆ ಮತ್ತು ವರ್ತನೆಯ ಮೇಲೆ ಬೀರುವ ಪ್ರಭಾವ ಸಾಮಾಜಿಕ ಮನೋವಿಜ್ಞಾನಿಯ ಅಧ್ಯಯನ ವಸ್ತು. ವ್ಯಕ್ತಿತ್ವವಿಕಾಸ ಮತ್ತು ಮಾಪನ ವ್ಯಕ್ತಿತ್ವ ಮನೋವಿಜ್ಞಾನದ ಅಧ್ಯಯನ ವಸ್ತು. ಸಂವೇಗಾತ್ಮಕ ಸಾಮಾಜಿಕ ಹೊಂದಾಣಿಕೆಯ ಸಮಸ್ಯೆ ಇರುವವರಿಗೆ, ವೃತ್ತಿ ಸಂಬಂಧವಾದ ಮತ್ತು ಶೈಕ್ಷಣಿಕ ಸಮಸ್ಯೆಗಳು ಇರುವವರಿಗೆ ಸಲಹಾ ಮನೋವಿಜ್ಞಾನಿ ಯುಕ್ತ ಸಲಹೆ ನೀಡುತ್ತಾನೆ. ಕಲಿಕೆ ಮತ್ತು ಬೋಧನೆ ಶೈಕ್ಷಣಿಕ ಮನೋವಿಜ್ಞಾನಿಯ ಅಧ್ಯಯನ ವಸ್ತು ಯುಕ್ತ ವ್ಯಕ್ತಿಗಳ ಆಯ್ಕೆ, ಕಾರ್ಮಿಕರ ಉತ್ಪಾದನಶೀಲತೆ ಗರಿಷ್ಠ ಮಟ್ಟದಲ್ಲಿ ಇರಬೇಕಾದರೆ ಅವರ ಮಾನಸಿಕ ಸ್ಥಿತಿ ಹೇಗಿರಬೇಕು ಮತ್ತು ಆ ಸ್ಥಿತಿಯನ್ನು ಉಂಟುಮಾಡುವುದೆಂತು- ಇವೇ ಮೊದಲಾದವು ಔದ್ಯಮಿಕ ಮನೋವಿಜ್ಞಾನಿಯ ಅಧ್ಯಯನ ವಸ್ತುಗಳು. ಜೀವನದ ಗುಣಮಟ್ಟದ ಮೇಲೆ ಪ್ರಭಾವಬೀರುವ ಪರಿಸರದ ಘಟಕಗಳು. ವರ್ತನೆಯ ಮೇಲೆ ಪರಿಸರಮಾಲಿನ್ಯ, ಜನಜಂಗುಳಿ ಸಂಪನ್ಮೂಲಗಳ ಕೊರತೆ ಇವುಗಳ ಪ್ರಭಾವ ಇವೇ ಮೊದಲಾದವು ಪರಿಸರ ಮನೋವಿಜ್ಞಾನಿಯ ಅಧ್ಯಯನ ವಸ್ತುಗಳು. ಸಂಕ್ಷಿಪ್ತವಾಗಿ, ಮನೋವಿಜ್ಞಾನದ ಕಾರ್ಯಕ್ಷೇತ್ರಕ್ಕೆ ನಿರ್ದಿಷ್ಟ ಸೀಮಾರೇಖೆ ಎಳೆಯುವುದು ಕಷ್ಟ ಎಂದೇ ಮನುಷ್ಯ ಎಂದರೇನು? ಈ ಪ್ರಶ್ನೆಗೆ ಉತ್ತರಿಸಲು ಯತ್ನಿಸುತ್ತದೆ ಮನೋವಿಜ್ಞಾನ ಎಂದು ಉದ್ಗರಿಸಿದ್ದಾನೆ ಎಡ್ವಿನ್ ಬೋರಿಂಗ್.

ಇತಿಹಾಸ : ಆಧುನಿಕ ಮನೋವಿಜ್ಞಾನದ ಕಾರ್ಯಕ್ಷೇತ್ರ ವಿಶಾಲವಾದದ್ದು. ಅಧ್ಯಯನ ವಸ್ತು ಸಂಕೀರ್ಣವಾದದ್ದು. ಆದ್ದರಿಂದ ಆಧುನಿಕ ಮನೋವಿಜ್ಞಾನದ ಬೇರುಗಳನ್ನು ಪ್ರಾಚೀನ ತತ್ತ್ವಶಾಸ್ತ್ರ, ಆಧ್ಯಾತ್ಮಕ, ಜೀವವಿಜ್ಞಾನ, ಧರ್ಮಗ್ರಂಥಗಳು, ಭೌತವಿಜ್ಞಾನ, ವೈದ್ಯಕೀಯ ವಿಜ್ಞಾನ- ಇವೆಲ್ಲ ಜ್ಞಾನಶಾಖೆಗಳಲ್ಲಿ ಕಾಣಬಹುದು.

ದೇಹದಿಂದ ಭಿನ್ನವಾದ ವಿಶಿಷ್ಟ ಘಟಕ ಹಿಂದಿದೆ. ಅದು ದೇಹವ್ಯಾಪಾರಗಳ ಮೂಲ ಚಾಲನಶಕ್ತಿ ಎಂಬ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲ ಧರ್ಮಗಳಲ್ಲೂ ಕಂಡುಬರುತ್ತದೆ. ಹಿಂದುಗಳ ಆತ್ಮ, ಗ್ರೀಕರ ಸೈಕಿ, ಕ್ರಿಶ್ಚಿಯನ್ನರ ಸ್ಪಿರಿಟ್ ಇವೆಲ್ಲವೂ ದೇಹದಿಂದ ಭಿನ್ನವಾದ ವರ್ತನೆಯ ನಿರ್ಧಾರಕಗಳು. ಅನೇಕ ಧರ್ಮಗ್ರಂಥಗಳಲ್ಲಿ ಈ ಅಗೋಚರವಸ್ತುವಿನ ಹಾಗೂ ಇದಕ್ಕೂ ದೇಹಕ್ಕೂ ನಡುವಿನ ಸಂಬಂಧದ ವಿಶ್ಲೇಷಣೆ ಕಾಣಬಹುದು. ಕಠೋಪನಿಷತ್, ಆತ್ಮ ರಥಿ, ಶರೀರ ರಥ, ಬುದ್ಧಿ ಸಾರಥಿ, ಮನಸ್ಸು ಲಗಾಮು, ಇಂದ್ರಿಯಗಳು ಕುದುರೆಗಳು, ವಿಷಯಗಳೆ ಮಾರ್ಗ ಎಂದು ಹೇಳಿದರೆ, ಸಂತ ಪಾಲ್ ಎಂಬಾತ ನ್ಯೂಮ ಅಥವಾ ಸ್ಪಿರಿಟ್ ದೈವ ಸ್ಪುರಿತ ಜೀವನ ತತ್ತ್ವ, ಸೋಲ್ ಅಥವಾ ಸೈಕಿ, ಸ್ಪಿರಿಟ್ ಅಭಿವ್ಯಕ್ತಿಗೊಳ್ಳುವ ಮಾನವ ಜೀವನ, ಸೋಮ ಅಥವಾ ದೇಹ ಸೈಕಿ ಚಾಲಿತಯಂತ್ರ ಎಂದು ಹೇಳಿದ್ದಾನೆ. ಆಧುನಿಕ ಮನೋವಿಜ್ಞಾನ ವಿವರಿಸುವ ಜಾಗೃದವಸ್ಥೆ (ವೇಕಿಂಗೆ ಸ್ಟೆಟ್), ಸ್ವಪ್ನಾವಸ್ಥೆ (ಡ್ರಿಮ್ ಸ್ಟೇಟ್, ರೆಮ್ ಸ್ಲೀಪ್ ಸ್ಟೇಟ್), ಗಾಢನಿದ್ರಾವಸ್ಥೆ(ಡೀಪ್ ಸ್ಲೀಪ್ ಸ್ಪೇಟ್) ಇವನ್ನು ಹೋಲುವ ವಿಶ್ಲೇಷಣೆ ಮಾಂಡೂಕ್ಯೋಪನಿಷತ್ತಿನ ಜಾಗೃದವಸ್ಥೆ, ಸ್ವಪ್ನಾವಸ್ಥೆ, ಸುಷುಪ್ತಾವಸ್ಥೆ, ತುರೀಯಾವಸ್ಥೆ. `ದೇಹ ನಶ್ವರ, ಆತ್ಮ ಶಾಶ್ವತ ಎಂಬ ವಾದದೊಂದಿಗೆ ಅತಿ ಸೂಕ್ಷ್ಮವಾದ, ನಯವಾದ, ಸದಾ ಚಲಿಸುತ್ತಿರುವ ಭೌತಕಣಗಳಿಂದ ಆತ್ಮ ಮಾಡಲ್ಪಟ್ಟಿದೆ. ವ್ಯಕ್ತಿ ಸತ್ತಾಗ ಈ ಕಣಗಳು ಚದರಿ ಹೋಗುತ್ತವೆ (ಡೆಮಾಕ್ರಿಟಿಸ್ 460-370) ಎಂಬ ವಾದವೂ ಇತ್ತು. ಹೀಗೆ ಪ್ರಪಂಚದ ಎಲ್ಲ ಧರ್ಮಗಳಲ್ಲಿ ಆಧುನಿಕ ಮನೋವಿಜ್ಞಾನದ ಅಧ್ಯಯನ ವಸ್ತುಗಳ ಉಲ್ಲೇಖವಿದೆ.

ಮನೋವಿಜ್ಞಾನ ಸಂಬಂಧಿ ವಿಷಯಗಳ ಉಲ್ಲೇಖ ಹೆಚ್ಚು ಕಂಡುಬರುವುದು ತತ್ತ್ವಶಾಸ್ತ್ರಗಳಲ್ಲಿ ಎಂದೇ, 19ನೆಯ ಶತಮಾನದ ಮಧ್ಯಭಾಗದ ತನಕ ಮನೋವಿಜ್ಞಾನ ತತ್ತ್ವಶಾಸ್ತ್ರದ ಭಾಗವಾಗಿತ್ತು. ಮನೋವಿಜ್ಞಾನವನ್ನು ತತ್ತ್ವಶಾಸ್ತ್ರದಿಂದ ಮೂಡಿಬಂದ ಜ್ಞಾನಶಾಖೆ ಎಂದೂ ಕರೆಯುವ ವಾಡಿಕೆ ಇದೆ. ಪ್ಲೇಟೋ (427-347) ಅನಂತರ ವಿಕಸಿಸಿದ ತತ್ತ್ವಶಾಸ್ತ್ರಗಳಲ್ಲಿ ಆಧುನಿಕ ಮನೋವಿಜ್ಞಾನದ ಎಲ್ಲ ವಿಚಾರಧಾರೆಗಳ ಮೂಲ ಶೋಧಿಸಬಹುದಾದರೂ ಅವನಿಗಿಂತಲೂ ಹಿಂದಿನ ದಾರ್ಶನಿಕರ ಕೃತಿಗಳಲ್ಲಿ ಕೂಡ ಮನೋವಿಜ್ಞಾನ ವಿಚಾರಲಹರಿಯ ತುಣುಕುಗಳು ದೊರೆಯುತ್ತವೆ.

ಕ್ರೊಟೋವಾದ ಆಲ್ಕ್‍ಮಿಯಾನ್‍ನ (ಕ್ರಿ.ಪೂ.6ನೆಯ ಶತಮಾನ) ದೃಷ್ಟಿ ಮತ್ತು ಶ್ರವಣಪ್ರಕ್ರಿಯ ವಿವರಣೆಯಲ್ಲಿ ಶರೀರಕ್ರಿಯಾಮನೋವಿಜ್ಞಾನದ ಛಾಯೆ ಇದೆ. ಅಗ್ರಿಗೆಂಟಮ್‍ನ ಎಂಪಿಡೋಕ್ಲಿಸ್‍ನ (495-435) ಒಂದು ವಸ್ತು ತನ್ನಂತೆಯೇ ಇರುವ ಸಜಾತೀಯ ವಸ್ತುವನ್ನು ಗ್ರಹಿಸುತ್ತದೆ (ಲೈಕ್ ಪರ್ಸಿವ್ಸ್ ಲೈಕ್) ಎಂಬ ತತ್ತ್ವದ ನಿರೂಪಣೆಯಲ್ಲಿ, ಡೆಮಾಕ್ರಿಟಿಸ್‍ನ (460-370) `ಪ್ರತಿಯೊಂದು ಜ್ಞಾನೇಂದ್ರಿಯವೂ ತನ್ನದೇ ಆದ ವಿಶಿಷ್ಟ ಬಹಿಃಪ್ರವಾಹಗಳನ್ನು ಸ್ವೀಕರಿಸುವ ಸಾಮಥ್ರ್ಯಹೊಂದಿದೆ. ಪ್ರತ್ಯಕ್ಷಾನುಭವ ವೈದೃಶ್ಯ ಉದ್ದೀಪಕಗಳಿಂದ ಪ್ರಭಾವಿತವಾಗುತ್ತದೆ ಎಂಬ ವಿವರಣೆಯಲ್ಲಿ ಆಧುನಿಕ ಮನೋವಿಜ್ಞಾನದ ಪ್ರತ್ಯಕ್ಷಾನುಭವ (ಪರ್ಸೆಪ್ಷನ್) ವಾದಗಳ ಮೂಲ ಕಾಣಬಹುದು. ಆ್ಯಬ್‍ಡಿರಾದ ಪ್ರೊಟಾಗೊರಸ್‍ನ (498-411) `ಸಂವೇದಗಳ ಉತ್ಪನ್ನವೇ ವ್ಯಕ್ತಿತ್ವ ಕುರಿತ ಜಿಜ್ಞಾಸೆ, ಪ್ರತ್ಯಕ್ಷಾನುಭವ ಗ್ರಹಿಸುವ ವ್ಯಕ್ತಿ ಮತ್ತು ಗ್ರಾಹ್ಯ ವಸ್ತುಗಳ ಅನ್ಯೋನ್ಯ ಕ್ರಿಯೆಯ ಪರಿಣಾಮ ಎಂಬ ಹೇಳಿಕೆಯಲ್ಲಿ ಪ್ರಕೃತಿ ಗೋಚರಾನುಭವ ವಾದದ (ಫೆನಾಮಿನಲಿಸಮ್) ಮೂಲ ಕಾಣಬಹುದು.

ಸಾಕ್ರಟಿಸ್ (ಕ್ರ.ಪೂ. 470-399) ಪ್ಲೇಟೊ, ಅರಿಸ್ಟಾಟಲ್( 384-322) ಇವರು ಪ್ರತಿಪಾದಿದ ದರ್ಶನ ತತ್ತ್ವಗಳಲ್ಲಿ ಮನೋವಿಜ್ಞಾನ ಸಂಬಂಧಿ ಜಿಜ್ಞಾಸೆ ವಿಪುಲವಾಗಿ ದೊರೆಯುತ್ತದೆ. ಎಲ್ಲ ಆಧುನಿಕ ವಿಜ್ಞಾನಗಳಲ್ಲಿ ಅಧ್ಯಯನಕ್ಕಾಗಿ ಬಳಸಲಾಗುತ್ತಿರುವ ಪ್ರಧಾನ ವಿಧಾನವೆಂದರೆ ನಿಗಮನ ವಿಧಾನ (ಡಿಡಕ್ಷನ್). ಇದರ ಮೂಲ ಪುರುಷ ಸಾಕ್ರೆಟಿಸ್ ಪ್ರಶ್ನೆಗಳನ್ನು ಕೇಳುವುದರ ಮೂಲಕ ವ್ಯಕ್ತಿಗೆ ಸತ್ಯದರ್ಶನವಾಗುವಂತೆ ಮಾಡುವ ಅವನ ತಂತ್ರ ಮುಂದೆ ಫ್ರಾಯ್ಡ್ ತನ್ನ ಮನೋವಿಶ್ಲೇಷಣಾ ವಿಧಾನದಲ್ಲಿ ಅಜಾಗೃತ ಮನಸ್ಸನ್ನು ಅನ್ವೇಷಿಸಲು ಬಳಸಿದ ತಂತ್ರದ ತಿರುಳಾಗಿದೆ. ಸಾಕ್ರಟೀಸ್ ಪದ್ದತಿಯಲ್ಲಿ ಕಂಡುಬರುವ ಪ್ರಶ್ನೆಗಳಿಗೆ ಮರುಪ್ರಶ್ನೆ ಹಾಕುವ ಮಾಲಕ ಅನುಕ್ರಯಿಸುವ ತಂತ್ರ ಕಾರ್ಲ್ ಪಿ. ರೋಜರ್ಸ್ ರೂಪಿಸಿದ ರೋಗಿಕೇಂದ್ರಿತ ಚಿಕಿತ್ಸಾವಿಧಾನದ ಮೂಲ. ಸಿ.ಜಿ. ಯೂಂಗ್ ರೂಪಿಸಿದ ವಿಶ್ಲೇಷಣಾ ಮನೋವಿಜ್ಞಾನದ ಅಡಿಗಲ್ಲಾದ 'ಸಂಚಿತ ಅಜಾಗೃತ ಮನಸ್ಸಿನ ಪರಿಕಲ್ಪನೆಯ ಮೂಲ ಕೂಡ ಸಾಕ್ರಟೀಸ್‍ನ ತಂತ್ರವೇ ಆಗಿದೆ.

ಪ್ಲೇಟೋ ಮನೋವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ. ತಲೆ, ಹೃದಯ, ಜಠರಗಳನ್ನು (ಯಕೃತ್) ಆಧಾರವಾಗಿ ಹೊಂದಿರುವ ಬುದ್ಧಿ, ಸಂಕಲ್ಪ ಶಕ್ತಿ (ವಿಲ್), ಪ್ರಬಲ ಕಾಮನೆಗಳು (ಅಪಿಟೈಟ್) ವ್ಯಕ್ತಿತ್ವದ ರಚನೆಯ ಪ್ರಧಾನ ಘಟಕಗಳು ಎಂಬ ವಾದ ವ್ಯಕ್ತಿತ್ವದ ಜೀವವೈಜ್ಞಾನಿಕ ವ್ಯಾಖ್ಯಾನ. ಕನಸುಗಳ ಅರ್ಥ ನಿರೂಪಣೆ, ಅಜಾಗೃತ ಅಭಿಪ್ರೇರಣೆ, ಆಲೋಚನೆಗಳ ಸಾಹಚಾರ್ಯ, ಪ್ರತ್ಯಾಕ್ಷಾನುಭವ ಮನೋವಿಜ್ಞಾನ ಇಂಥ, ಅನೇಕ ಮನೋವಿಜ್ಞಾನ ಸಂಬಂಧಿ ವಿಷಯಗಳ ಜಿಜ್ಞಾಸೆ ಪ್ಲೇಟೋನ ಕೃತಿಗಳಲ್ಲಿ ಸಿಕ್ಕುತ್ತವೆ.
ಆತ್ಮದ ಪರಿಕಲ್ಪನೆಯ ವ್ಯಾಖ್ಯಾನ, ಆತ್ಮ ವಾಸ್ತವೀಕರಣದ (ಸೆಲ್ಪ್ ಆಕ್ಚುವಲೈಸೇಶನ್) ಅಥವಾ ಆತ್ಮಸಾಕ್ಷಾತ್ಕಾರದ (ಸೆಲ್ಪ್ ರಿಜುಲೈಸೇಷನ್) ಮನೋವಿಜ್ಞಾನ. ವೈದ್ಯಕೀಯ ಮನೋವಿಜ್ಞಾನ ಇವುಗಳಿಗೆ ಸಂಬಂಧಿಸಿದ ಅನೇಕ ಪರಿಕಲ್ಪನೆಗಳ ಮೂಲವನ್ನು ಅರಿಸ್ಟಾಟಲ್‍ನ ಕೃತಿಗಳಲ್ಲಿ ಕಾಣಬಹುದು. ಪ್ರಾಣಿವರ್ತನೆಯನ್ನು ವಸ್ತುನಿಷ್ಠವಾಗಿ ವೀಕ್ಷಿಸಿ ಅರ್ಥೈಸುವ ಯತ್ನವನ್ನು ಕೂಡ ಮನೋವಿಜ್ಞಾನ ಅಥವಾ ತೌಲನಿಕ ಮನೋವಿಜ್ಞಾನದ ಜನಕ. ಸಂವೇದನೆ, ಜ್ಞಾಪಿಸಿಕೊಳ್ಳುವಿಕೆ, ಇಚ್ಚಿಸುವಿಕೆ, ಪ್ರತಿಕ್ರಿಯೆ ತೋರುವಿಕೆ, ಆಲೋಚಿಸುವಿಕೆ- ಇವೆ ಮೊದಲಾದ ಮನಸ್ಸಿನ ಅಥವಾ ಆತ್ಮದ ಕಾರ್ಯಗಳನ್ನು ಅಧ್ಯಯನ ಮಾಡಲು ಅರಿಸ್ಟಾಟಲ್ ಆರಂಭಿಸಿದ್ದರಿಂದ ಈತನನ್ನು ಕಾರ್ಯಶೀಲ ಮನೋವಿಜ್ಞಾನದ (ಫಂಕ್ಷನಲ್ ಸೈಕಾಲಜಿ) ಜನಕನೆಂದೂ ಕರೆಯಲಾಗಿದೆ.

ಅರಿಸ್ಟಾಟಲ್ ಅನಂತರದ ದಾರ್ಶನಿಕರಲ್ಲಿ ಸಂತ ಅಗಸ್ಟೀನ್‍ನ (354-430) ಕೊಡುಗೆ `ಅಂತರ್ವೀಕ್ಷಣಾ ಪದ್ಧತಿ' ಉಲ್ಲೇಖಾರ್ಹ. ಮನುಷ್ಯ ಜ್ಞಾನೇಂದ್ರಯಗಳ ಮೂಲಕ ವಸ್ತುನಿಷ್ಠವೀಕ್ಷಣೆ ಮಾಡುವ ಸಾಮರ್ಥ ಹೊಂದಿರುವನಲ್ಲದೆ ತನ್ನ ಮಾನಸಿಕ ಆಗುಹೋಗುಗಳನ್ನು ಸ್ವವೀಕ್ಷಣೆ ಮಾಡುವ ಸಾಮಥ್ರ್ಯ ಕೂಡ ಹೊಂದಿರುತ್ತಾನೆ ಎಂಬ ಈತನ ವಾದವೇ ಅಂತರ್ವೀಕ್ಷಣೆ ಪದ್ದತಿಯ ಮೂಲ. ಮನಸ್ಸು-ದೇಹ ಸಂಬಂಧ, ಸ್ಮøತಿ ತಿಳಿವಳಿಕೆ ಸಂಕಲ್ಪಶಕ್ತಿ ಇವೇ ಮೊದಲಾದ ಕೆಲವು ಪರಿಕಲ್ಪನೆಗಳ ಜಿಜ್ಞಾಸೆಯನ್ನು ಇವನ ಕೃತಿ `ಆನ್ ದಿ ಟ್ರಿನಿಟಿ' ಯಲ್ಲಿ ಕಾಣಬಹುದು.

ಮಧ್ಯಯುಗದ ಪ್ರಥಮ ಭಾಗದಿಂದ ಅರ್ಥಾತ್ ಜಸ್ಟಿನಿಯನ್ ಕ್ರಿ.ಶ. 529ರಲ್ಲಿ ಅಕಾಡೆಮಿಯನ್ನು ಮುಚ್ಚಿದಂದಿನಿಂದ, 12ನೆಯ ಶತಮಾನದ ವಿಶ್ವವಿದ್ಯಾಲಯಗಳ ಉದಯದ ತನಕ ಮನೋವಿಜ್ಞಾನ ಗಮನಾರ್ಹ ಪ್ರಗತಿ ಸಾಧಿಸಲಿಲ್ಲ. ಈ ಅವಧಿಯ ಬಳಿಕ ಮನೋವಿಜ್ಞಾದ ಚರಿತ್ರೆಯಲ್ಲಿ ಮೊದಲು ಉಲ್ಲೇಖಿಸಬೇಕಾದವ ಸಂತ ತಾಮಸ್ ಅಕ್ವಿನಾಸ್ (1225-74). ಅರಿಸ್ಟಾಟಲ್‍ನ ಬೋಧನೆಗಳನ್ನು ಪುನರುಜ್ಜೀವನಗೊಳಿಸಿದ ಈತ. ಅವನ ಕೊಡುಗೆಯಾದ `ಸೈಕಿ' ಪರಿಕಲ್ಪನೆಯನ್ನು ಸ್ವಲ್ಪ ಬದಲಿಸಿ, ತನ್ನದೇ ಆದ ವಾದಗಳನ್ನು ಸೇರಿಸಿದ. ದೇಹ- ಆತ್ಮಗಳ ಅವಿಭಾಜ್ಯ ಘಟಕ ಮಾನವ ಎಂಬುದು ಈತನ ವಾದ. ಅಂದ ಮಾತ್ರಕ್ಕೆ ದೇಹ-ಆತ್ಮಗಳು ಯಾವುದೋ ಒಂದು ಸತ್ಯದ ವಿಭಿನ್ನ ಮುಖಗಳು ಎಂದು ಭಾವಿಸಕೂಡದು. ಇವೆರಡೂ ತಮ್ಮವೇ ಆದ ಸ್ವತಂತ್ರ ಲಕ್ಷಣಗಳನ್ನು ಹೊಂದಿರುವ ಮೂಲವಸ್ತುಗಳು ಎಂಬುದು ಇವನ ಅಭಿಪ್ರಾಯ. ಆತ್ಮಕ್ಕೆ ಮೂರು ನಿರ್ದಿಷ್ಟ ಶಕ್ತಿಗಳಿವೆ ಎಂದ ಈತ ಅವುಗಳ ಕಾರ್ಯಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದಾನೆ.

ರೆನೆ ಡೆಕಾರ್ಟೆಯನ್ನು (1596-1650) ಶರೀರಕ್ರಿಯಾ (ಫಿಸಿಯಲಾಜಿಕಲ್) ಮನೋವಿಜ್ಞಾನದ ಜನಕ ಎನ್ನಲಾಗಿದೆ. ಯಾಂತ್ರಿಕ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಯಂತ್ರವೇ ಮನುಷ್ಯ ದೇಹ, ಮಿದುಳಿನ ಪೈನಿಯಲ್ ಗ್ರಂಥಿಯಲ್ಲಿ ಸ್ಥಾಪಿತವಾಗಿರುವ ಮನಸ್ಸು ಅಥವಾ ಆತ್ಮ ಈ ಯಂತ್ರದ ಮೇಲೆ ಪರೋಕ್ಷ ಪ್ರಭಾವ ಬೀರುತ್ತದೆ. ಜ್ಞಾನೇಂದ್ರಿಯಗಳಿಂದ ಮಿದುಳಿನವರೆಗೆ ಇರುವ `ಸೂಕ್ಷ್ಮತಂತುಗಳ ಚಟುವಟಿಕೆಗಳು ಸಂವೇದನಾ ಚಟುವಟಿಕೆಗಳ ಮೂಲ. ನರತಂತುಗಳ ಮೂಲಕ ಪ್ರಾಣಿ ಚೇತನ (ಆ್ಯಅನಿಮಲ್ ಸ್ಪಿರಿಟ್) ತುಂಬಿ ಸ್ನಾಯುಗಳು, ಉಬ್ಬುವುದರಿಂದ ಪ್ರತಿವರ್ತನೆ (ರಿಫ್ಲೆಕ್ಸ್ ಆ್ಯಕ್ಷನ್) ಉಂಟಾಗುತ್ತದೆ ಎಂಬುದು ಈತನ ವಾದ. ಸಂವೇದಗಳು, ದೈಕ್ ಪ್ರತ್ಯಕ್ಷಾನುಭವ. ಸಂಕಲ್ಪಶಕ್ತಿ ಮತ್ತು ಸ್ಮøತಿ- ಇವುಗಳ ಅಧ್ಯಯನ ಕ್ಷೇತ್ರಗಳಿಗೂ ಡೆಕಾರ್ಟೆ ಕಾಣಿಕೆ ಸಲ್ಲಿಸಿದ್ದಾನೆ. ಇದೇ ಕಾಲದ ಬೆನೆಡಿಕ್ಟ್ ಸ್ಪಿನೋಜಾ (1632-77) ಮನೋಭೌತಿಕ ಸಮಾಂತರತೆ ಸಿದ್ಧಾಂತ ಮಂಡಿಸಿದ. ಈ ಸಿದ್ಧಾಂತದ ಪ್ರಕಾರ ಅಸಂಖ್ಯ ಗುಣಗಳುಳ್ಳ ಒಂದು ಮೂಲವಸ್ತು ಇದೆ. ಇದರ ಎರಡು ಮುಖಗಳೇ ಮನಸ್ಸು ಮತ್ತು ದೇಹ. ಆದ್ದರಿಂದ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಜರಗುವ ಕ್ರಿಯೆ ಇನ್ನೊಂದರ ಮೇಲೆ ಪ್ರಭಾವ ಬೀರುತ್ತದೆ. ಪ್ರಪಂಚದಲ್ಲಿ ನಡೆಯುವ ಯಾವುದೇ ಘಟನೆಗೆ ತರ್ಕಬದ್ದ ವಿವರಣೆ ನೀಡಲು ಸಾಧ್ಯ ಎನ್ನುವ ತರ್ಕಪಾರಮ್ಯವಾದದ ಆಧಾರ ವಚನ ಸ್ವ-ಅರಿವಿನ ಮೂಲಕ ಸಂವೇಗಗಳ ನಿಯಂತ್ರಣ ಸಾಧ್ಯ ಎನ್ನುವ ವಾದ ಮನೋವಿಜ್ಞಾನಕ್ಕೆ ಈತನ ಇತರ ಕೊಡುಗೆಗಳು. ವ್ಯಕ್ತಿತ್ವವನ್ನು ಜ್ಯಾಮಿತಿ ಪದ್ದತಿಯ ಮೂಲಕ ಅಧ್ಯಯನ ಮಾಡುವ ಈತನ ಪ್ರಯತ್ನ ಇಂದಿನ ಗಣಿತ ಮನೋವಿಜ್ಞಾನದ ಬುನಾದಿ. ಡೆಕಾರ್ಟೆ, ಸ್ಪಿನೋಜಾ ಇವರ ಗುಂಪಿಗೆ ಸೇರಿಸಲ್ಪಡಬಹುದಾದ ಲೈಪ್ನಿಟ್ (1640-1710 )ಕೂಡ ದೇಹ-ಮನಸ್ಸು ಸಂಬಂಧದ ಬಗ್ಗೆ ತನ್ನದೆ ಆದ ಪೂರ್ವಸ್ಥಾಪಿತ ಸಾಮರಸ್ಯ ಸಿದ್ಧಾಂತ ಮಂಡಿಸಿದ. `ಮೊನ್ಯಾಡ್(ಗ್ರೀಕ್ ಮೂಲದ ಈ ಪದಕ್ಕೆ ಒಂದು, ಏಕತೆ, ವೈಯಕ್ತಿಕ ಇತ್ಯಾದಿ ಅರ್ಥಗಳಿವೆ) ಪರಿಕಲ್ಪನೆ ಆಧಾರಿತ ಈ ಸಿದ್ದಾಂತದ ಪ್ರಕಾರ ಆತ್ಮರಹಿತ ದೇಹ ಇರಲು ಸಾಧ್ಯವೇ ಇಲ್ಲ, ಅರ್ಥಾತ್ ಜಡವಸ್ತುವಿನ ಪರಿಕಲ್ಪನೆಯೇ ಮಿಥ್ಯ. ಆದ್ದರಿಂದ ಮನಸ್ಸು ಜಡವಸ್ತು ಅಲ್ಲ ಚಲನಶೀಲ ಚಟುವಟಿಕೆ. ಬುದ್ಧಿಶಕ್ತಿ ಕೂಡ ಒಂದು ಚಟುವಟಿಕೆ. ಪ್ರಜ್ಞೆ ಅಜಾಗೃತ ಸ್ಥಿತಿಯಿಂದ ಮೊದಲ್ಗೊಂಡು ಜಾಗೃತ ಸ್ಥಿತಿಯವರೆಗಿನ ಅಖಂಡ ಸರಣಿಯ ವಿವಿಧ ಸ್ತರಗಳಲ್ಲಿ ಇರುತ್ತದೆ. ಇಮ್ಯಾನ್ಯುಯಲ್ ಕಾಚ್(1724-1804) ಮೊದಲಾದವರ ಕೊಡುಗೆಗಳಾದ ಕಾಂಟಿಯನ್ ನೇಟಿವಿಸಮ್, ಸಂಕಲ್ಪಶಕ್ತಿಯ ಮನೋವಿಜ್ಞಾನ ಕೂಡ ಚರಿತ್ರೆಯಲ್ಲಿ ಉಲ್ಲೇಖಾರ್ಹವಾದವು.

ಬೆಳವಣಿಗೆ: ಅನುಭವೈಕವಾದ (ಎಂಪಿರಿಸಿಸಮ್) ಮತ್ತು ಸಾಹಚರ್ಯವಾದದ ಜನಕನೆಂದು ಪರಿಗಣಿತವಾಗಿರುವ ತಾಮಸ್ ಹಾಬ್ಸಾನ (1598-1679) ಕೃತಿಗಳಾದ ಹ್ಯೂಮನ್ ನೇಚರ್ (1650) ಮತ್ತು ಲಿವಿಯಾತಾನ್(1651) ಮನೋವಿಜ್ಞಾನ ದೃಷ್ಟಿಯಿಂದ ಪ್ರಮುಖವಾದವು. ಈತ ಸ್ಮøತಿ ವರ್ಗಕ್ಕೆ ಸೇರುವ ಚಟುವಟಿಕೆಗಳನ್ನು ಮಾತ್ರ ಆಧಾರವಾಗಿರಿಸಿಕೊಂಡು ಸಾಹಚರ್ಯದ ಸಂಪರ್ಕನಿಯಮಗಳ ರೂಪುರೇಷೆಗಳನ್ನು ನೀಡಿದ. ಇದು ಅನುಭವೈಕ್ಯವಾದ ಮತ್ತು ಸಾಹಚರ್ಯವಾದದ ಬೆಳವಣಿಗೆಯ ಮೇಲೆ ಗಮನಾರ್ಹ ಪ್ರಭಾವ ಬೀರಿತು. `ಹುಟ್ಟಿದಾಗ ಮನಸ್ಸು ಒಂದು ಖಾಲಿ ಫಲಕ ಅಥವಾ ಹಾಳೆಯಂತಿರುತ್ತದೆ(ಟ್ಯಾಬ್ಯುಲರಾಸಾ) ಎಂಬ ವಾದದ ಪ್ರವರ್ತಕ ಜಾನ್ ಲಾಕ್‍ನ (1632-1704)ಕೃತಿ ಆನ್ ಎಸ್ಸೆ ಕನ್ಸರ್ನಿಂಗ್ ಹ್ಯೊಮನ ಅಂಡರ್ ಸ್ಟೇಟಿಂಗ್‍ನಲ್ಲಿ (ನಾಲ್ಕನೇಯ ಆವೃತಿ 1700) ಇರುವ ಅಸೋಸಿಯೇಷನ್ ಆಫ್ ಐಡಿಯಾಸ್ ಎಂಬ ಅಧ್ಯಾಯ ಮುಂದಿನ ಎರಡು ಶತಮಾನಗಳ ಕಾಲ ಸಾಹಚರ್ಯವಾದಿಗಳ ಚಿಂತನೆಯ ಮೇಲೆ ಪ್ರಭಾವ ಬೀರಿತು. ಜಾರ್ಜ್ ಬರ್ಕಾಲಿಯ (1685-1735) `ದ ನ್ಯೂ ತಿಯರಿ ಆಫ್ ವಿಶನ್‍ದಲ್ಲಿಯ (11709) ದೂರದ ಪ್ರತ್ಯಕ್ಷಾನುಭವದ ಜಿಜ್ಞಾಸೆ `ಪ್ರಿನ್ಸಿಪಲ್ಸ್ ಆಫ್ ಹ್ಯೊಮನ್ ನಾಲೆಜ್ ಗ್ರಂಥದಲ್ಲಿಯ (1710) `ಸಂವೇದಿಸಲ್ಪಡದ ಪ್ರತ್ಯಕ್ಷಾನುಭವಕ್ಕೆ ಲಭ್ಯವಾಗುವ ವಸ್ತುವೇ ಇಲ್ಲ ಎಂಬ ತತ್ತ್ವದ ಚರ್ಚೆ ಡೇವಿಡ್ ಹ್ಯೊಮ್‍ನ (1711-76) `ಟ್ರಿಟೈಸ್ ಆಫ್ ಹ್ಯೊಮನ್ ನೇಚರ್‍ಬೀಯಿಂಗ್ ಆ್ಯನ್ ಅಟೆಂಪ್ಟ್ ಟು ಇನ್‍ಟ್ರೊಡ್ಯೊಸ್ ದಿ ಎಕ್ಸ್‍ಪೆರಿಮೆಂಟಲ್ ಮೆತಡ್ ಆಫ್ ರಾಸನಿಂಗ್ ಇನ್ ಟು ಮಾರಲ್ ಸಬ್ಜೆಟ್ ಎಂಬ ಹೆಸರಿನ 3 ಭಾಗಗಳುಳ್ಳ ಗ್ರಂಥಗಳಲ್ಲಿ ಪ್ರತಿಪಾದಿಸಲ್ಪಟ್ಟ `ವ್ಯಕ್ತಿತ್ವ ಒಂದು ಪ್ರತ್ಯಕ್ಷನುಭವಗಳ ಕಂತೆ ಎಂಬವಾದ ಡೇವಿಡ್ ಹಾಟ್ಲೆಯ (1705-57) `ಆಲೋಚನೆಗಳ ಸಾಹಚರ್ಯದ ಬಗೆಗಿನ ಜಿಜ್ಞಾಸೆ : ತಾಮಸ್ ರೈಡ್‍ನ (1710-96) ಸಂವೇದನೆ ಮತ್ತು ಪ್ರತ್ಯಕ್ಷಾನುಭವ ಸಿದ್ಧಾಂತ ಮನೋವಿಜ್ಞಾನಕ್ಕೆ ಬ್ರಿಟಿಷರ ಕೊಡುಗೆಗಳಾಗಿವೆ. ತಾಮಸ್ ಬ್ರೌನ್(1778-1820) ಮಂಡಿಸಿದ ಸಲಹೆಯ ಪ್ರಾಥಮಿಕ ಮತ್ತು ದ್ವಿತೀಯಕ ನಿಯಮಗಳು ವಿಲಿಯಮ್ ಹ್ಯಾಮಿಲ್ಟನ್‍ನ (1788-1856) ಪುನಃ ಸಂಘಟನೆಯ (ರೆಡೆಂಟೆಗ್ರೇಷನ್) ನಿಯಮ, ಜೆಮ್ಸ್ ಮಿಲ್ (1773- 1836) ಸಾಹಚರ್ಯಾವಾದಕ್ಕೆ ಭದ್ರಬುನಾದಿ ಹಾಕಲು ನಡೆಸಿದ ವ್ಯವಸ್ಥಿತ ಪ್ರಯತ್ನ ಮತ್ತು ತತ್ಪಪರಿಣಾಮವಾಗಿ ಮೋಡಿಬಂದ `ಆವರ್ತನಿಯಮ ಜಾನ್ ಸ್ಟೊವರ್ಟ್ ಮಿಲ್ (1806-73) ರೂಪಿಸಿದ. (1) ಸಾದೃಶ್ಯ (2) ಸಾಮೀಪ್ಯ (3) ಆವರ್ತ ಅವಿಭಾಜ್ಯತೆ ನಿಯಮಗಳು. ಅಲೆಕ್ಸಾಂಡರ್ ಬೇಯ್ನ್‍ನ (1818-1903) ಸಾಹಚರ್ಯ ಸಿದ್ಧಾಂತ, ಸಂಕಲ್ಪ ಸಿದ್ಧಾಂತಗಳು ಸಾಹಚರ್ಯವಾದದ ಬೆಳವಣಿಗೆಗೆ ಕಾರಣವಾದವು. ಚಾರಿತ್ರಿಕ ಮೌಲ್ಯದ ದೃಷ್ಟಿಯಿಂದ ಜೀವವಿಜ್ಞಾನದ ವಿಕಾಸವಾದದ ಬೆಳವಣಿಗೆಯಿಂದ ಪ್ರಭಾವಿತರಾಗಿ ಆಂತರಿಕ ಸಂಬಂಧಗಳು ಮತ್ತು ಬಾಹ್ಯ ಸಂಬಂಧಗಳು ಇವುಗಳ ನಡುವಿನ ನಿರಂತರ ಹೋಂದಾಣಿಕೆಯೇ ಜೀವನ ಎಂದ ಹರ್ಬರ್ಟ್ ಸ್ಪೆನ್ಸರ್(1820-1903) `ದ ಎಕ್ಸ್‍ಪ್ರೆಷನ್ ಆಫ್ ದ ಎಮೋಷನ್ಸ್ ಇನ್ ಮ್ಯಾನ್ ಅಂಡ್ ಅನಿಮಲ್ ಎಂಬ ಗ್ರಂಥ (1872) ಬರೆದ ಚಾಲ್ಸ್ ಡಾರ್ವಿನ್ (1809-82) ಸ್ಮರಣೀಯರು. ಮನುಷ್ಯ ಮತ್ತು ಪ್ರಾಣಿ ಗುಣಾತ್ಮಕವಾಗಿ ಸಜಾತೀಯರು ಎಂಬ ಡಾರ್ವಿನನ ತರ್ಕ ಮುಂದೆ ವರ್ತನವಾದಿಗಳಿಂದ ಉಪಯೋಗಿಸಲ್ಪಟ್ಟದಲ್ಲದೆ ಪ್ರಾಣಿವರ್ತನೆಯ ಮನೋವೈಜ್ಞಾನಿಕ ಅಧ್ಯಯನಗಳ ಜನನಕ್ಕೆ ಕಾರಣವಾಯಿತು.

ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ `ಸೈಕಾಲಜಿ' ಎಂಬ ಶೀರ್ಷಿಕೆಯಲ್ಲಿ ಉಪನ್ಯಾಸಗಳನ್ನು ನೀಡಲು ಆರಂಭಿಸಿದವ ಜಾರ್ಜ್‍ಕ್ರೂಮ್ ರಾಬರ್ಟ್‍ಸನ್ (1842-92) ಇಂಗ್ಲೆಂಡಿನ ಮೊದಲನೆಯ ಮನೋವಿಜ್ಞಾನದ ಪತ್ರಿಕೆ ಮೈಂಡ್‍ನ ಸಂಪಾದಕ ಈತ. ಸನ್ಸೇಶನ್ ಅಂಡ್ ಇನ್ ಟ್ಯೂಶನ್ (1874), ಔಟ್ ಲೈನ್ಸ್ ಆಫ್ ಸೈಕಾಲಜಿ (1884), ದಿ ಹ್ಯೂಮನ್ ಮೈಂಡ್, ಎ ಟೆಕ್ಸ್ಟ್ ಬುಕ್ ಆಫ್ ಸೈಕಾಲಜಿ (1802) ಮೊದಲಾದ ಗ್ರಂಥಗಳನ್ನು ಬರೆದು ಪಠ್ಯಪುಸ್ತಕ ಲೇಖಕನೆಂದು ಬ್ರಿಟನ್‍ನಲ್ಲಿ ಖ್ಯಾತನಾದ ಜೇಮ್‍ಸಲ್ಲಿಯ (1842-1923) ಪ್ರೋತ್ಸಾಹದಿಂದಾಗಿ ಲಂಡನ್ ಯೂನಿವರ್ಸಿಟಿ ಕಾಲೇಜಿನಲ್ಲಿ ಬ್ರಿಟನ್ನಿನ ಪ್ರಥಮ ಪ್ರಾಯೋಗಿಕ ಮನೋವಿಜ್ಞಾನಿ ಅನ್ನಿಸಿಕೊಂಡ ವಿಲಿಯಮ್ ಹಾಲ್ಸೆ ರಿವರ್ಸ್ ರಿವರ್ಸ್‍ನ (1864-1922) ನಿರ್ದೇಶನದಲ್ಲಿ ಪ್ರಾಯೋಗಿಕ ಮನೋವಿಜ್ಞಾನ ಪ್ರಯೋಗಿಕಶಾಲೆ ಅಕ್ಟೋಬರ್ 1897ರಲ್ಲಿ 1897ರಲ್ಲಿ ಸ್ಥಾಪಿಸಲ್ಪಟ್ಟಿತು. ಇದೇ ವಿದ್ಯಾಲಯದಲ್ಲಿ 1901 ಅಕ್ಟೋಬರ್ 24ರಂದು ಸಲ್ಲಿಯ ಮುಂದಾಳುತನದಲ್ಲಿ ಬ್ರಿಟಿಷ್ ಸೈಕಲಾಜಿಕಲ್ ಸೊಸೈಟಿ ಸ್ಥಾಪನೆ ಆಯಿತು. ಆ್ಯನ್ ಎಸ್ಸೆ ಆನ್ ಲಾಫ್ಟರ್ (1902) ಬರೆದದ್ದರಿಂದ ಈತನನ್ನು ರಸಾಭಿಜ್ಞಾನ (ಏಸ್ತೆಟಿಕ್ಸ್) ಮನೋವಿಜ್ಞಾನಿ ಎಂದೂ ಸ್ಟಡೀಸ್ ಆಫ್ ಚೈಲ್ಡ್ ಹುಡ್ (1895) ಬರೆದದ್ದರಿಂದ ಶಿಶುಮನೋವಿಜ್ಞಾನ ಅಧ್ಯಯನಗಳ ಮಾರ್ಗದರ್ಶಕರಲೊಬ್ಬ ಎಂದೂ ಪರಿಗಣಿಸಲಾಗಿದೆ. ಪ್ರೈಮರ್ ಆಫ್ ಫಿಸಿಯಲಾಜಿಕಲ್ ಸೈಕಾಲಜಿ (1905), ಅನ್ ಇಂಟ್ರೊಡಕ್ಷನ್ ಟು ಸೋಷಿಯಲ್ ಸೈಕಾಲಜಿ (1908) ಸೈಕಾಲಜಿ (1908) ಸೈಕಾಲಜಿ ದ ಸ್ಟಡಿ ಆಫ್ ಬಿಹೇವಿಯರ್ (1912), ದಗ್ರೂಪ್ ಮೈಂಡ್ (1920), ಔಟ್‍ಲೈನ್ ಆಫ್ ಸೈಕಾಲಜಿ (1923), ಮೊದಲಾದ ಗ್ರಂಥಗಳನ್ನು ಬರೆದು ಹಾರ್ಮಿಕ್ ಥಿಯರಿ ಎಂದು ಪ್ರಸಿದ್ಧವಾದ ಸಿದ್ಧಾಂತ ಮಂಡಿಸಿದವ ವಿಲಿಯಮ್ ಮ್ಯಕ್‍ಡೂಗಲ್ (1871-1938). ಬ್ರಿಟನ್ನಿನ ಸಾಮಾಜಿಕ ಮನೋವಿಜ್ಞಾನಿಗಳಲ್ಲಿ ಮೊದಲಿಗ, ವರ್ತನವಾದವನ್ನು ಒಪ್ಪದೆ ಇದ್ದರೂ ಅವರು ಬಳಸುವ ಮನೋವಿಜ್ಞಾನದ ಮೂಲವ್ಯಾಖ್ಯಾನ ನಿರೂಪಿಸಿದವ ಎಂದು ಖ್ಯಾತನಾದ ಈತನ ಸಿದ್ಧಾಂತ ಉದ್ಧೇಶ ಪೂರ್ವಕವಾಗಿ ಶ್ರಮಿಸುವಿಕೆ ಮತ್ತು ಹುಟ್ಟುಗುಣ ಮೂಲದಿಂದ ಶಕ್ತಿಯ ಪೂರೈಕೆ ಎಂಬ ಪರಿಕಲ್ಪನೆಗಳ ಸುತ್ತ ಹೆಣೆಯಲ್ಪಟ್ಟಿದೆ. ಹುಟ್ಟುಗುಣಗಳಿಗೆ (ಇನ್ ಸ್ಟಿಂಕ್ಟ್) ಈತ ಕೊಟ್ಟಷ್ಟು ಪ್ರಾಧಾನ್ಯ ಇನ್ನಾರೂ ನೀಡಿಲ್ಲ. ಹೆರಿಟರಿ ಜೀನಿಯಸ್ ಆನ್ ಇನ್ಕ್ವಯರಿ ಇನ್ ಟು ಇಟ್ಸ್ ಕಾಸಸ್ ಅಂಡ್ ಕಾನ್ಸಿಕ್ವೆನ್ಸಸ್ (1869) ಗ್ರಂಥಕರ್ತೃ ಫ್ರಾನ್ಸಿಸ್ ಗಾಲ್ಟನ್ (18-2-1911) ಸಂಖ್ಯಾಕಲನ ವಿಜ್ಞಾನದ ವಿಶ್ಲೇಷಣ ಪದ್ಧತಿಗಳ ಬೆಳವಣಿಗೆ ಅಮೆರಿಕದ ಪ್ರಾಯೋಗಿಕ ಮನೋವಿಜ್ಞಾನದ ಬೆಳವಣಿಗೆಗೆ ಕಾರ್ಯಾತ್ಮಕ ಮನೋವಿಜ್ಞಾನದ (ಫಂಕ್ಷನಲ್ ಸೈಕಾಲಜಿ) ಜನನಕ್ಕೆ, ಮನೋಮಿತಿ (ಸೈಕೊಮೆಟ್ರಿಕ್ಸ್) ಶಾಸ್ತ್ರದ ಬೆಳವಣಿಗೆ, ವ್ಯಕ್ತಿ ವ್ಯತ್ಯಾಸಗಳ ಪರಿಣಾಮಾತ್ಮಕ ಅಧ್ಯಯನಗಳ ಬೆಳವಣಿಗೆಗೆ ಕಾರಣ ಪುರುಷ ಕಾರ್ಲ್‍ಪಿಯಾರ್ಸನ್ (1857-1936): ಕಾರಕ (ಫ್ಯಾಕ್ಟರ್) ವಿಶ್ಲೇಷಣೆಯ ಜನಕ ಚಾಲ್ರ್ಸ್ ಸ್ಪಿಯರ್‍ಮನ್ (1863-11946) ಈ ಕ್ಷೇತ್ರದ ಇತರ ಉಲ್ಲೇಖಾರ್ಹರು.
ಪ್ರಾಯೋಗಿಕ ಮನೋವಿಜ್ಞಾನ ಬೆಳೆಯಲು ಕಾರಣರಾದವರು ಶರೀರಕ್ರಿಯಾ ವಿಜ್ಞಾನಿಗಳು. ಇದರಲ್ಲಿ ಜರ್ಮನಿಯ ವಿಜ್ಞಾನಿಗಳದ್ದು ಅಗ್ರಸ್ಥಾನ. ಸ್ಪೆಸಿಫಿಕ್ ಎನರ್ಜಿ ಆಫ್ ನವ್ರ್ಸ್ ಸಿದ್ಧಾಂತ ರೂಪಿಸಿದ ಯೋಹನ್ ಪೀಟರ್ ಮುಲ್ಲರ್‍ನನ್ನು (1860-58) ಪ್ರಾಯೋಗಿಕ ಶರೀರಕ್ರಿಯಾ ವಿಜ್ಞಾನದ ಜನಕ ಎಂದು ಪರಿಗಣಿಸಲಾಗಿದೆ. ಪ್ರತ್ಯಕ್ಷಾನುಭವಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಾ ಸಮಯ ಪ್ರಯೋಗ, ಪ್ರತ್ಯಕ್ಷಾನುಭವ ಸಿದ್ಧಾಂತ, ಶ್ರವಣಕ್ರಿಯೆಯ ಸಿದ್ಧಾಂತ, ವರ್ಣಸಿದ್ಧಾಂತ ಮೊದಲಾದ ಸಿದ್ಧಾಂತಗಳನ್ನು ಪ್ರಯೋಗ ಮುಖೇನ ರೂಪಿಸಲು ಪ್ರಯತ್ನಿಸಿದ ಖ್ಯಾತಿ ಇವನದ್ದು. ಕಲಿಕೆಯ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಸ್ಮøತಿ ಶಕ್ತಿಯ ಅಧ್ಯಯನಕ್ಕಾಗಿ ಪ್ರಯೋಗಗಳನ್ನು ಮಾಡಿ ಖ್ಯಾತನಾದವ ಹರ್ಮಿನ್ ಎಬ್ಬಿಂಗ್ ಹಾಸ್ (1850-1909) ಐಕ್ಯ ಎಂದು ಜನಪ್ರಿಯವಾಗಿರುವ ಬುದ್ಧುಂಕದ ಪರಿಕಲ್ಪನೆಯನ್ನು ರೂಪಿಸಿದ ಲ್ಯೂಯಿಸ್ ಸ್ಟರ್ನ್ (1871-1938) ಫ್ರಾನ್ಸಿನಲ್ಲಿ ಮನೋವಿಜ್ಞಾನದ ಪ್ರಥಮ ಪತ್ರಿಕೆ ಮತ್ತು ಪ್ರಯೋಗಾಲಯ ಸ್ಥಾಪಿಸಿ ಮಾನಸಿಕ ವಯಸ್ಸಿನ ಪರಿಕಲ್ಪನೆ ರೂಪಿಸಿ ಬುದ್ಧಿಶಕ್ತಿಯ ಮೊದಲನೆಯ ಪರೀಕ್ಷೆಯನ್ನು ಸೃಷ್ಟಿಸಿದ ಆಲ್ಫ್ರೆಡ್ ಬೀನೇ (1857-1911) ಇವರು ಮನೋವಿಜ್ಞಾನದಲ್ಲಿ ವಿವಿಧ ಪರೀಕ್ಷೆಗಳ ರಚನೆಯ ಕಾರಣಕರ್ತರಾಗಿದ್ದಾರೆ. 

ವಿಲಿಯಮ್ ಜೇಮ್ಸ್(1842-1910) ಹಾರ್ವಡ್‍ನಲ್ಲಿ 1874 ರಲ್ಲಿ ಪ್ರಾಯೋಗಿಕ ಮನೋವಿಜ್ಞಾನದ ಪ್ರಯೋಗಶಾಲೆ ಸ್ಥಾಪಿಸಿದ್ದಾಗಿ ಹೇಳಿಕೊಂಡರೂ ಸಂಪ್ರದಾಯರೀತ್ಯ ವಿಲ್ ಹೆಲ್ಮ್ ವೂಂಟ್ 1879 ರಲ್ಲಿ ಸ್ಥಾಪಿಸಿದ ಪ್ರಯೋಗಾಲಯಕ್ಕೆ ಪ್ರಪಂಚದಲ್ಲಿ ಮನೋವಿಜ್ಞಾನದ ಪ್ರಥಮ ಪ್ರಯೋಗಾಲಯ ಎಂಬ ಖ್ಯಾತಿ ಇದೆ. ಪ್ರತ್ಯಕ್ಷಾನುಭವಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಿದ ಅನ್ಸ್ರ್ಟ್ ಹೆನ್ರಿಚ್ ವೆಬರ್ (1795-1878). ಮನೋಭೌತವಿಜ್ಞಾನದ ಬೆಳವಣಿಗೆಗೆ ಕಾರಣನಾದ ಗಸ್ಟಾವ್ ತಿಯೋಡರ್ ಫೆಚನರ್ (1801-87) ಇವರ ಅಧ್ಯಯನಗಳ ಪ್ರೇರಣೆಯಿಂದ ಪ್ರಯೋಗಾಲಯ ಸ್ಥಾಪಿಸಲ್ಪಟ್ಟಿತು. ಬಿಂಬ ರಹಿತ ಆಲೋಚನೆಯ ವರ್ಜ್‍ಬರ್ಗ್ ಪಂಥದ ಜನಕ ಓಸ್ವಾಲ್ಡ್‍ಕಲ್ಪ್ (1865-1915). ಪ್ರಥಮ ಗಣಿತ ಮನೋವಿಜ್ಞಾನಿ ಎನ್ನಿಸಿಕೊಂಡ ಯೋಹಾನ್ ಫ್ರೆಡ್ರಿಕ್ ಹರ್ಬರ್ಟ್ (1776-1841), ಸ್ಥಳೀಯ ಸಂಕೇತ ಸಿದ್ಧಾಂತ ಕರ್ತೃ ರುಢಾಲ್ಪ್ ಹರ್ಮನ್ ಲೋಟ್ಸೆ (1817-1881), ಗೆಟಿಂಗಿನ್ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ಬೇರೂರಲು ಕಾರಣರಾದವರು. ಮನೋವಿಜ್ಞಾನದ ಇಂದ್ರಿಯ ಗೋಚರಾನುಭವವಾದ (ಫೆನಾಮಿವಲಿಸಮ್) ಮೂಲ ಪ್ರವರ್ತಕ ಎಡ್ಮಂಡ್ ಹಸ್ಸೆಲ್ (1859-1930). ವರ್ಣಕ್ಕೆ ಸಂಬಂಧಿಸಿದ ಇಂದ್ರಿಯ ಗೋಚರಾನುಭವ ವಾದದ ಸಿದ್ದಾಂತ ರೂಪಿಸಿದ ಡೇವಿಡ್ ಕಾಟ್ಜ್ (1884-1953), ಆಕೃತಿ -ಹಿನ್ನೆಲೆ (ಫಿಗರ್ ಗ್ರೌಂಡ್)ಘಟನೆಯ ದೃಕ್ ಪ್ರತ್ಯಕ್ಷಾನುಭವವನ್ನು ಅಭ್ಯಸಿಸಿದ ಎಡ್ಗರ್ ರೂಬಿನ್ (1886-1951) ಮನೋವಿಜ್ಞಾನದ ಇತಿಹಾಸದಲ್ಲಿ ಉಲ್ಲೇಖಾರ್ಹರು. ಕ್ರಿಯೆ ಮನೋವಿಜ್ಞಾನದ (ಅಕ್ಟ್ ಸೈಕಾಲಜಿ) ಜನಕ ಫ್ರಾನ್ಸ್ ಬ್ರೆಂಟಾನೊ (1838-1917). ಈ ಪಂಥದ ಬೆಳವಣಿಗೆಗೆ ಕಾಣಿಕೆ ಸಲ್ಲಿಸಿದ ಇತರ ಉಲ್ಲೇಖಾರ್ಹ ವ್ಯಕ್ತಿಗಳು-ಅಲೆಕ್ಸಿಯಾಸ್ ಮೈನಾಂಗ್ (1853-1920) ಮತ್ತು ಕ್ರಿಸ್ಟಿಯನ್ ಫ್ರೆಡರ್ ಎಡ್ರೆಸ್ಫೆಲ್ಸ್, (1859-1932) ಕಾಲಸ್ಟಂಫ್ (1848-1936).
ಫ್ರ್ಯಾಂಕ್ಫಟಿನ ಇನ್ಸ್‍ಟಿಟ್ಯೂಟ್ ಆಫ್ ಸೈಕಾಲಜಿಯಲ್ಲಿ ಕಾರ್ಯನಿರತನಾಗಿದ್ದ ಮ್ಯಾಕ್ಸ್ ವರ್ದೈವ್ಮರ್ (1880-1943) ತಾನು ಮಾಡಿದ ಪ್ರಯೋಗಗಳ ವರದಿ ಮಂಡಿಸಿದಾಗ (1912). ಜೆಸ್ಟಾಲ್ಟ್ ಸೈಕಾಲಜಿ ಅಂದು ಖ್ಯಾತವಾಗಿರುವ ಮನೋವಿಜ್ಞಾನ ಪಂಥ ಉದಯಿಸಿತು. ಈತನೊಂದಿಗೆ ವುಲ್ಪಗ್ಯಾಂಗ್ ಕಾಯ್ಲರ್(1887-1967) ಮತ್ತು ಕರ್ಟ್‍ಕಾಫ್ಕ (1887-1941) ಇವರಿಗೂ ಜೆಸ್ಟಾಲ್ಟ್ ಪಂಥದ ಸ್ಥಾಪನೆಯ ಶ್ರೇಯಸ್ಸು ಸಲ್ಲುತ್ತದೆ. ಉತ್ತಮ ಜೆಸ್ಟಾಲ್ಟ್‍ಗಳು ಪ್ರಾಗ್ನಾಜ್, ಒಳನೋಟದಿಂದ ಕಲಿಕೆ ಇವೇ ಮೊದಲಾದ ಪರಿಕಲ್ಪನೆಗಳು ಈ ಪಂಥದವರ ಕೊಡುಗೆ. ಆತ್ಮ ವಾಸ್ತವೀಕರಣ, ಪರಿಕಲ್ಪನೆಯ ಶಿಲ್ಪಿ ಅಬ್ರಾಹಮ್ ಎಚ್ ಮ್ಯಾನ್ಲೊ (1908-1976) ವರ್ದೈಮರ್ ಮತ್ತು ಕಾಫ್ಕರ ಶಿಷ್ಯ. ಕರ್ಟ್ ಗೋಲ್ಡ್‍ಸ್ಟೈನ್ (1878-1965) ಕಾಲ್ ಆರ್.ರೋಜರ್ಸ್ (1902) ಮೊದಲಾದವರೊಡಗೂಡಿ ಮುಂದೆ ಈತ ಮನೋವಿಜ್ಞಾನ ಮಾನವಹಿತ ಪ್ರತಿಪಾದಕ (ಹ್ಯೂಮನಿಸಮ್) ಪ್ರವರ್ತಕವಾದ. ಕ್ಷೇತ್ರ ಸಿದ್ಧಾಂತ ಮತ್ತು ಟೋಪೋಲಾಜಿಕಲ್ ಸೈಕಾಲಜಿಯ ಜನಕ ಕರ್ಟ್ ಲ್ಯೂವಿನ್(1890-1947) ಲ್ಯೂವಿನಿಯನ್ ಸಂಪ್ರದಾಯ ಬೆಳೆಯಲು ಕಾರಣನಾದ.
ಮನೋವಿಜ್ಞಾನದ ಪ್ರಮುಖ ಅಂಗಗಳಲ್ಲಿ ಒಂದಾದ ಮನೋಚಿಕಿತ್ಸೆ (ಸೈಕೊತೆರಪಿ) ಇಂದಿನ ರೂಪಕ್ಕೆ ಬೆಳೆದದ್ದು ಫ್ರಾನ್ಸ್‍ನಲ್ಲಿ. ಮನೋಚಿಕಿತ್ಸೆಯ ಮೂಲ ವಶೀಕರಣ ಸುಪ್ತಸ್ಥಿತಿ (ಹಿಪ್ನಾಟಿಸ್) ಫ್ರೆಡ್ರಿಕ್ ಆಂಟನ್‍ಮೆಸ್ಮರನ್ (1734-1815) ಶ್ರಮದಿಂದ ಆಸ್ಟ್ರಿಯಾದ ವಿಯಾನ್ನಾದಲ್ಲಿ ಜನ್ಮ ತಳೆಯಿತು. ಮನೋರೋಗಿಗಳನ್ನು ಮಾನವೀಯ ದೃಷ್ಟಿಯಿಂದ ಶುಶ್ರೂಷೆ ಮಾಡುವಂತೆ ವೈದ್ಯರ ಮನ ಒಲಿಸಿ, ಮನೋಚಿಕಿತ್ಸಾಪದ್ಧತಿಯಲ್ಲಿ ಕ್ರಾಂತಿ ಉಂಟು ಮಾಡಿ, ಇಂದಿನ ವೈದ್ಯಕೀಯ ಮನೋವಿಜ್ಞಾನದ ಪ್ರಗತಿಗೆ ಕಾರಣನಾದವ ಫಿಲಿಪ್ ಪೈನೆಲ್ (1745-1826), ಫ್ರೆಂಚ್ ಮನೋಚಿಕಿತ್ಸೆ ಜನಕ ಜಿನ್ ಎಸ್ಕ್ವಿರುಲ್ (1772-1840), ವೈದ್ಯಕೀಯ ನರವಿಜ್ಞಾನದ (ನ್ಯೂರಾಲಜಿ)ಜನಕ ಜೀನ್ ಮಾರ್ಟಿನ್ ಚಾರ್ಕಾಟ್(1825-1893), ಮಾನಸಿಕ ಪರೀಕ್ಷೆಗಳ ಪರಂಪರೆಯ ಆಲ್‍ಫ್ರೆಂಡ್ ಬಿನೇ (1857-1911) ಇವರುಗಳ ಕೊಡುಗೆ ಸ್ಮರಣೀಯ. ಶಿಶುಮನೋವಿಜ್ಞಾನದ ಬೆಳವಣಿಗೆಗೆ ತಿಯೋಡರ್ ಫ್ಲೂರ್‍ನಾಯ್ (1854-1920), ಎಡ್ವಡ್ ಕ್ಪಾಪರೀಡ್ (1873-1940) ಕಾರಣನಾದರೆ, ಎವರ ಸಾಲಿನಲ್ಲಿ ಬಂದ ಸ್ವಿಸ್ ಮನೋವಿಜ್ಞಾನಿ ಜೀನ್ಪಿಯಾಜೆ(1891-1980) ಬೌದ್ಧಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಮಾಡಿದ ಅಧ್ಯಯನಗಳು ಇಂದಿಗೂ ಪ್ರಭಾವ ಬೀರುತ್ತಿವೆ. ವ್ಯಕ್ತಿತ್ವದ ರಚನೆ, ಮನಸ್ಸಿನ ಅಂಗವಿನ್ಯಾಸದ ಚಿತ್ರಗಳನ್ನು ಒಳಗೊಂಡು ಮನೋರೋಗನಿಧಾನ ಮತ್ತು ಚಿಕಿತ್ಸೆಯ ಅದ್ವಿತೀಯ ವಿಧಾನ ಅನ್ನಿಸಿಕೊಂಡ ಮನೋವಿಶ್ಲೇಷಣೆಯ ಶಿಲ್ಪಿ, ಹೊಸ ಪಂಥವೊಂದರ ಮೂಲಪುರುಷ ವಿಯನ್ನಾದ ಸಿಗ್ಮಂಡ್ ಫ್ರಾಯ್ಡ್‍ನ (1856-1939) ಕೊಡುಗೆಗಳು ಮನೋವಿಜ್ಞಾನ ಕ್ಷೇತ್ರದಲ್ಲಿ ಅಚ್ಚಳಿಯದ ಮುದ್ರೆ ಒತ್ತಿವೆ. ಮೂಲತಃ ಫ್ರಾಯ್ಡ್‍ನ ಶಿಷ್ಯರಾಗಿದ್ದು ಮುಂದೆ ತಮ್ಮವೇ ಆದ ವಿಶ್ಲೇಷಣಾತ್ಮಕ ಮನೋವಿಜ್ಞಾನ, ವ್ಯಕ್ತಿಮನೋವಿಜ್ಞಾನ ರೂಪಿಸಿದ ಖ್ಯಾತಿ ಅನುಕ್ರಮವಾಗಿ ಕಾರ್ಲ್‍ಗಸ್ಟಾಪ್ ಯೂಂಗ್(1875-1961) ಮತ್ತು ಆಲ್ಪ್ರೆಡ್ ಆಡ್ಲರ್ (1870-1937) ಇವರಿಗೆ ಸಲ್ಲುತ್ತದೆ. ವ್ಯಕ್ತಿತ್ವ ವಿಕಾಸಕ್ಕೆ ಸಾಂಸ್ಕøತಿಕ ವಿವರಣೆಕೊಡುವ ಪ್ರವೃತ್ತಿಯ ಮೂಲ ಆ್ಯಡ್ಲರ್ ರೂತ್‍ಬೆನೆಡಿಕ್ಡ್ (1887-1948), ಮಾರ್ಗರೆಟ್ ಮೀಡ್ (1901-78) ಕರೆನ್‍ಹಾರ್ನಿ (1885-1952), ಮಾನವ ಹಿತಪ್ರತಿಪಾದಕ ಮನೋವಿಶ್ಲೇಷಕ ಎರಿಕ್‍ಫ್ರಾಮ್ (1900- ) ಮನೋರೋಗ ಚಿಕಿತ್ಸೆಯ ವ್ಯಕ್ತಿ ಸ್ವರೂಪ ರಹಿತ ಪದ್ದತಿಯ ಪ್ರವರ್ತಕ ಹ್ಯಾರಿ ಸ್ಟ್ಯಾಕ್ ಸಲ್ಲಿವನ್ (1892-1949) ಈ ಪದ್ಧತಿಯ ಪೋಷಣೆಗೆ, ನವಫ್ರಾಯ್ಟ್‍ಪಂಥ ರಚನೆಗೆ ಕಾರಣರಾದರು. ಲೋಗೋ ತೆರಪಿಯ ಶಿಲ್ಪಿ ವಿಕ್ಟರ್ ಇ ಫ್ರೆಂಕ್ (1905- ), ರೋಗಿಕೇಂದ್ರಿತ ಚಿಕಿತ್ಸಾ ವಿಧಾನದ ಪ್ರವರ್ತಕ ಕಾರ್ಲ್ ಆರ್ ರೋಜರ್ಸ್ (1902- ), ಮನೋನಾಟಕ (ಸೈಕೋಡ್ರಾಮ) ಮತ್ತು ಸಮೂಹ ಮನೋಚಿಕಿತ್ಸೆಯ ಪ್ರವರ್ತಕ ಜೆ.ಲ್. ಮಾರಿನೋ (1892-1974) ಗೋಚರಾನುಭವವಾದ (ಫೆನಾಮಿನಲಿಸಮ್) ಮತ್ತು ಅಸ್ತಿತ್ವವಾದಗಳ (ಎಕ್ಸಿಸ್ಟೆನ್ಯಿಯಲಿಸಮ್) ಪ್ರಭಾವಕ್ಕೊಳಗಾದ ಇವರು ಉಲ್ಲೇಖಾರ್ಹರು.

ಕಾರ್ಯಾತ್ಮಕ ಮನೋವಿಜ್ಞಾನ (ಫಂಕ್ಷನಲ್ ಸೈಕಾಲಜಿ) ಹೆಚ್ಚು ಜನಪ್ರಿಯವಾಗಿರುವ ಅಮೆರಿಕದಲ್ಲಿ ಕೂಡ ಮನೋವಿಜ್ಞಾನ ಗುರುತಿಸಬಹುದಾದ ಹಂತಗಳಲ್ಲಿ ಬೆಳೆಯಿತು. ನೈತಿಕ ತತ್ತ್ವಶಾಸ್ತ್ರ ಮತ್ತು ಮಾನಸಿಕ ತತ್ತ್ವಶಾಸ್ತ್ರದ ಅವಧಿ ಎಂದು ಕರೆಯಬಹುದಾದ ಒಂದನೆಯ ಹಂತದಲ್ಲಿ (1640-1776) ನೀತಿಶಾಸ್ತ್ರ ಮತ್ತು ತತ್ತ್ವಶಾಸ್ತ್ರದಲ್ಲಿ ಮನೋವಿಜ್ಞಾನ ಹಾಸುಹೊಕ್ಕಾಗಿ ಹೆಣೆದುಕೊಂಡಿತ್ತು. ಹಾಬ್ಸ್‍ನ ಹ್ಯೂಮನ್ ನೇಚರ್(1650), ಬಕ್ರ್ಲೆಯ ನ್ಯೂ ತಿಯರಿ ಆಫ್ ವಿಶನ್ (1709), ಡೆಕಾರ್ಟೆಯ ಡಿಸ್ಕೋರ್ಸ್ ಆನ್ ಮೆತೆಡ್(1637), ಲಾಕ್‍ನ ಎಸ್ಸೆ ಕನ್ಸರ್ನಿಂಗ್ ಹ್ಯೂಮನ್ ಅಂಡರ್‍ಸ್ಟೇಂಡಿಂಗ್ (1690), ಹ್ಯೂಮ್‍ನ ಟ್ರಿಟೈಸ್ ಆನ್ ಹ್ಯೂಮನ್ ನೇಚರ್(1739), ಮೊದಲಾದ ಗ್ರಂಥಗಳು ಮನೋವಿಜ್ಞಾನದ ಅಧ್ಯಯನಕ್ಕೆ ಬಳಸುತ್ತಿದ್ದವುಗಳಾಗಿದ್ದವು. ಬೌದ್ಧಿಕ ತತ್ತ್ವಶಾಸ್ತ್ರದ ಅವಧಿ(1776-1886) ಎಂದು ಕರೆಯಬಹುದಾದ ಎರಡನೆಯ ಹಂತದಲ್ಲಿ ತಾಮಸ್ ರೈಡ್, ಡಗಾಲ್ಡ್ ಸ್ಟ್ಯೂವರ್ಟ್ ಪ್ರೇರಿತ ಸ್ಕಾಟಿಷ್ ಮನೋವಿಜ್ಞಾನ ಅಮೇರಿಕಕ್ಕೆ ಪ್ರವೇಶಿಸಿ ಅಮೆರಿಕದ ಮನೋವಿಜ್ಞಾನಿಗಳ ಮೊದಲನೆಯ ಪೀಳಿಗೆಯ ಉದಯದ ತನಕ ಪ್ರಚಾರದಲ್ಲಿ ಇತ್ತು. ಅಮೇರಿಕದ ಪುನರುಜ್ಜೀವನದ ಅವಧಿ (1886-96) ಎನ್ನಬಹುದಾದ ಮೂರನೆಯ ಹಂತದಲ್ಲಿ ಮ್ಯಾಕ್‍ಕಾಷ್‍ನ ಗ್ರಂಥ ಸೈಕಾಲಜಿ (1886), ಮನೋವಿಜ್ಞಾನದ ಎಂದರೆ ಮಾನಸಿಕ ತತ್ತ್ವಶಾಸ್ತ್ರ ಎನ್ನುವ ಕಲ್ಪನೆಯನ್ನು ತೊಡೆದುಹಾಕಿತು. ಹಾರ್ವರ್ಡ್‍ನ ಖ್ಯಾತ ಮನೋವಿಜ್ಞಾನಿಶರೀರ ಕ್ರಿಯಾವಿಜ್ಞಾನಿ, ವಿಲಿಯಮ್ ಜೇಮ್ಸ್ (1842-1910) ಬರೆದ ಪ್ರಿನ್ಸಿಪಲ್ಸ್ ಆಫ್ ಸೈಕಾಲಜಿ (1890) ಅಮೆರಿಕದಲ್ಲಿ ಮನೋವಿಜ್ಞಾನ ಸ್ವತಂತ್ರ ವಿಜ್ಞಾನವಾಗಲು ಕಾರಣವಾಯಿತು. ಈತ ಮನೋವಿಜ್ಞಾನದ ಕಾರ್ಯಾತ್ಮಕವಾದದ ಮೂಲಪುರುಷ ಕೂಡ. ಪ್ರಜ್ಞೆಯ ಹೊನಲು, ಪರಿಕಲ್ಪನೆ, ಅಹಂನ (ಸೆಲ್ಪ್) ಸಿದ್ಧಾಂತ, ಜೇಮ್ಸ್-ಲೇಂಜ್ ಸಂವೇಗ ಸಿದ್ಧಾಂತಗಳು ಜೇಮ್ಸ್ ಕೊಡುಗೆಗಳಾಗಿವೆ. ಸಂರಚನವಾದಿ ಮತ್ತು ಅಂತರ್ವಿಕ್ಷಣೆ ಪ್ರವರ್ತಕರಲ್ಲೊಬ್ಬನಾದ ಟಿಚನರ್‍ನ ಶಿಷ್ಯನಾಗಿದ್ದರೂ ಗುರುವಿನಿಂದ ಭಿನ್ನವಾದ ಹಾದಿ ತುಳಿದು ಹ್ಯಾಂಡ್ ಬುಕ್ ಆಫ್ ಎಕ್ಸ್‍ಪೆರಿಮೆಂಟಲ್ ಸೈಕಾಲಜಿ(1951) ಗ್ರಂಥ ಬರೆದು, ಮನೋವಿಜ್ಞಾನ ಹಾರ್ವರ್ಡ್‍ನಲ್ಲಿ ತತ್ತ್ವಶಾಸ್ತ್ರದ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಸಹಾಯ ಮಾಡಿದ ಖ್ಯಾತಿ ಇ.ಜಿ. ಬೋರಿಂಗ್‍ಗೆ (1886-1968) ಸಲ್ಲುತ್ತದೆ. ಕಾರ್ಯಾತ್ಮಕವಾದ ಬೆಳೆದ ಅವಧಿ (1896ರ ಅನಂತರ) ಅಮೇರಿಕದಲ್ಲಿ ಮನೋವಿಜ್ಞಾನ ಬೆಳವಣಿಗೆಯ ನಾಲ್ಕನೆಯ ಹಂತ. ಈ ಹಂತದ ವೈಶಿಷ್ಟ್ಯಗಳು ಅನೇಕ.

ಬೋರಿಂಗ್‍ನ ಖ್ಯಾತ ಶಿಷ ಬರಸ್ ಫ್ರೆಡ್ರಿಕ್ ಸ್ಕಿನ್ನರ್(1904-). ಇಂದಿಗೂ ಉಪಯೋಗದಲ್ಲಿರುವ ವರ್ತನೆಯ ರೂಪಿಸುವಿಕೆ, ಕ್ರಿಯಾಜನ್ಯ ಅನುಬಂಧನ ಮೊದಲಾದ ಪರಿಕಲ್ಪನೆಗಳ ಶಿಲ್ಪಿ ಈತ. ವರ್ತನವಾದದ ಛಾಯೆ ಇರುವ ಗ್ರಂಥಗಳಾದ ಬಿಹೇವಿಯರ್ ಆಫ್ ಅರ್ಗೆನಿಸಮ್ಸ್ (1938) ಮತ್ತು ಸೈನ್ಸ್ ಆಂಡ್ ಹ್ಯೂಮನ್ ಬಿಹೇವಿಯರ್(1935); ಪ್ರೋಗ್ರಾಂಡ್ ಇನ್‍ಸ್ಟ್ರಕ್ಷನ್ ಪರಿಕಲ್ಪನೆ, ಬೋಧನ ಯಂತ್ರದ ಅವಿಷ್ಕಾರ ಈತನ ವಿಶಿಷ್ಟ ಕೊಡುಗೆಗಳು. ಕಾಗ್ನಿಟಿವ್ ಸೈಕಾಲಜಿಯ ಛಾಯೆ ಇರುವ ಎಡ್ವರ್ಡ್‍ಚಾಸ್ ಟಾಲ್‍ಮನ್ (1886-1959) ಪ್ರತಿಪಾದಿತ ಉದ್ದೇಶಪೂರಿತ ವರ್ತನವಾದ, ವ್ಯಕ್ತಿತ್ವ ಅಧ್ಯಯನಕ್ಕೆ ಪ್ರಶಂಸನೀಯ ಕೊಡುಗೆ ಸಲ್ಲಿಸಿದ ಗಾರ್ಡನ್ ಡಬ್ಲ್ಯೂ ಆಲ್ ಪೊರ್ಟ್ (1897-1967) ಈ ಅವಧಿಯಲ್ಲಿಯ ಖ್ಯಾತ ಹೆಸರುಗಳು. ಅಮೆರಿಕದಲ್ಲಿ ಮನೋವಿಜ್ಞಾನದಲ್ಲಿ ಪ್ರಥಮ ಡಾಕ್ಟರೇಟ್ ಗಳಿಸಿದವ (1878ಹಾರ್ವರ್ಡ್), ಅಮೆರಿಕನ್ ಜರ್ನಲ್ ಆಫ್ ಸೈಕಾಲಜಿ (1887) ಎಂಬ ಹೆಸರಿನಲ್ಲಿ ಮನೋವಿಜ್ಞಾನಕ್ಕೆ ಮೀಸಲಾದ ಪತ್ರಿಕೆಯನ್ನು ಮೊದಲು ಪ್ರಕಟಿಸಿದವ, ಔಪಚಾರಿಕವಾಗಿ ಮನ್ನಣೆ ಗಳಿಸಿದ ಪ್ರಥಮ ಮನೋವಿಜ್ಞಾನ ಪ್ರಯೋಗಾಲಯವನ್ನು ಅಮೆರಿಕದಲ್ಲಿ ಸ್ಥಾಪಿಸಿದವ (1884. ಜಾನ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯ), ಮನೋವಿಜ್ಞಾನ ಇಲಾಖೆಯೊಂದು ಸ್ವತಂತ್ರವಾಗಿ ಡಾಕ್ಟರೇಟ್ ಪದವಿ ನೀಡಲು ಮೊದಲು ಕಾರಣನಾದವ ಕಾರುಣ್ಯ ಮನೋವಿಜ್ಞಾನ (1904) ಮತ್ತು ಮುಪ್ಪಿನ ಮನೋವಿಜ್ಞಾನ (1922) ಶಾಖೆಗಳ ಉದಯಕ್ಕೆ ಕಾರಣನಾದವ ಎಂದು ಹೆಸರಾದವ ಗ್ರ್ಯಾನ್‍ವಿಲ್ಲಿ ಸ್ಟ್ಯಾನ್ಲಿಹಾಲ್ (1844-1924). ಬುದ್ಧ್ಯಂಕ ಅಳತೆಯ ಕ್ಷೇತ್ರದಲ್ಲಿ ಗಮನಾರ್ಹ ಸಂಶೋಧನೆ ಮಾಡಿದ ಖ್ಯಾತಿ ಹಾಲ್‍ನ ಶಿಷ್ಯ ಲ್ಯೂವಿಸ್ ಮ್ಯಾಡಿಸನ್ ಟರ್ಮನ್‍ನಿಗೆ (1877-1950) ಸಲ್ಲುತ್ತದೆ. ಶಿಶುವಿಕಾಸಕ್ಕೆ ಸಂಬಂಧಿಸಿದ ಅಧ್ಯಯನಗಳ ಮೂಲಕ, ವಿಕಾಸಲಬ್ಧಗಳನ್ನು ಉಪಯೋಗಿಸಲು ಯತ್ನಿಸುವ ಮೂಲಕ ಖ್ಯಾತನಾದವ ಹಾಲ್‍ನ ಇನ್ನೊಬ್ಬ ಶಿಷ್ಯ ಯೇಲ್ ವಿಶ್ವವಿದ್ಯಾಲಯದ ಅರ್ನಾಲ್ಡ್ ಲ್ಯೂಸಿಯಸ್ ಗೆಸೆಲ್(1880-1961). ಹಾಲ್‍ನ ಇನ್ನೊಬ್ಬ ಶಿಷ್ಯ ನಾರ್ಮನ್ ಟ್ರಿಪ್ಲೆಟ್ (ಜ.1861) ಪ್ರಥಮ ಪ್ರಾಯೋಗಿಕ ಸಾಮಾಜಿಕ ಮನೋವಿಜ್ಞಾನಿ ಎನ್ನಿಸಿಕೊಂಡ.

ಡ್ರೈವ್ ರಿಡಕ್ಷನ್ ತಿಯರಿ ಆಫ್ ಲರ್ನಿಂಗ್ ಪ್ರತಿಪಾದಿಸಿದ ಕ್ಲಾರ್ಕ್ ಎಲ್. ಹಲ್ (1884-1952). ಸ್ಟಿಮ್ಯುಲಸ್ ಸ್ಯಾಂಪ್ಲಿಂಗ್ ತಿಯರಿ ಆಫ್ ಲರ್ನಿಂಗ್‍ನ ಪ್ರವರ್ತಕ ವಿಲಿಯಮ್ ಕೆ ಎಸ್ಟೆಸ್ (ಜ.1919). ಸೋಷಿಯಲ್ ಲರ್ನಿಂಗ್ ತಿಯರಿ ಪ್ರತಿಪಾದಕರಾದ ಜಾನ್ ಡಾಲ್ಲಾರ್ಡ್ (ಜ.1900) ಮತ್ತು ನೀಲ್ ಇ.ಮಿಲ್ಲರ್ (ಜ.1909). ಕಲಿಕೆಯ ದ್ವಿಕಾರಕ ಸಿದ್ಧಾಂತದ ಸೃಷ್ಟಿಕರ್ತ ಆರ್ವಲ್ ಹೂಬಾರ್ಟ್ ಮೌರರ್ (ಜ.1907) ಯೇಲ್ ವಿಶ್ವವಿದ್ಯಾಲಯದವರಾದ್ದರಿಂದ ಅದು ಕಲಿಕೆಯ ವಾದಗಳ ಆಗರ ಎನಿಸಿಕೊಂಡಿತು.

ವೂಂಟ್ ಮತ್ತು ಹಾಲ್ ಈರ್ವರಿಂದಲೂ ದೀಕ್ಷೆ ಪಡೆದ ಜೇಮ್ಸ್ ಮ್ಯಾಕ್‍ಕೀನ್ ಕೆಟೇಲ್ (1800-1944) ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಕಾರ್ಯಪ್ರವೃತ್ತನಾಗಿದ್ದು ಮನೋವಿಜ್ಞಾನದ ಬೆಳೆವಣಿಗೆಗೆ ನೀಡಿದ ಕೊಡುಗೆಗಳು ಅಪಾರ. ಮನೋಭೌತವಿಜ್ಞಾನಕ್ಕೆ ಸಂಬಂಧಿಸಿದ ಅಧ್ಯಯನಗಳು, ಪ್ರತಿಕ್ರಿಯಾ ಅವಧಿ, ಸಾಹಚರ್ಯ, ಮಾನಸಿಕ ಸಾಮಥ್ರ್ಯಗಳು, ವ್ಯಕ್ತಿ ವ್ಯತ್ಯಾಸಗಳು, ಓದುವಿಕೆಯಲ್ಲಿ ಪ್ರತ್ಯಕ್ಷಾನುಭವ, ರ್ಯಾಂಕಿಂಗ್ ಪದ್ಧತಿ- ಮೊದಲಾದ ಕ್ಷೇತ್ರಗಳಲ್ಲಿ ಈತ ಮಾಡಿದ ಪ್ರಾಯೋಗಿಕ ಅಧ್ಯಯನಗಳು ಚರಿತ್ರೆಯ ದೃಷ್ಟಿಯಿಂದ ಮಹತ್ತ್ವ ಪೂರ್ಣವಾದುವು.

ಅನಿಮಲ್ ಇಂಟೆಲಿಜೆನ್ಸ್(1911) ಪುಸ್ತಕದ ಮೂಲಕ ಸಂಪರ್ಕವಾದದ ಪ್ರವರ್ತಕನಾದ ಎಡ್ವರ್ಡ್‍ಲೀ ತಾರ್ನ್ ಡೈಕ್ (1874-1949) ಕೆಟೇಲ್‍ನ ಶಿಷ್ಯ. ಮುದ್ರೆಯೊತ್ತುವಿಕೆ, ಮುದ್ರೆ ಅಳಿಸುವಿಕೆ, ಪ್ರಯತ್ನ- ದೋಷ ಕಲಿಕೆ ಮೊದಲಾದ ಪರಿಕಲ್ಪನೆಗಳನ್ನು ಒಳಗೊಂಡ ವಿಶಿಷ್ಟ ಕಲಿಕೆಯವಾದ, ಕಲಿಕೆಯ ನಿಯಮಗಳು, ತರಬೇತಿಯ ವರ್ಗಾವಣೆಯ ಸಿದ್ಧಾಂತ, ಬುದ್ಧಿಶಕ್ತಿ ರಚನೆಯ ಸಿದ್ಧಾಂತಗಳು ಈತನ ವಿಶಿಷ್ಟ ಕೊಡುಗೆಗಳು ಅಭಿಪ್ರೇರಣೆಗೆ ಪ್ರಾಧಾನ್ಯ ನೀಡುವ ಗತ್ಯಾತ್ಮಕ (ಡೈನಾಮಿಕ್) ಮನೋವಿಜ್ಞಾನ ಕೆಟಲ್‍ನ ಇನ್ನೊಬ್ಬ ಶಿಷ್ಯ ರಾಬರ್ಟ್ ಎಸ್. ವುಡ್‍ವರ್ತನ (1869-1962) ಕೊಡುಗೆ. ಆಧುನಿಕ ಮನೋವಿಜ್ಞಾನದ ಚರಿತ್ರೆಯನ್ನು ಮನೋವಿಜ್ಞಾನದ ಒಂದು ಭಾಗವಾಗಿ ಮೊದಲು ಬೋಧಿಸತೊಡಗಿದ ಖ್ಯಾತಿ ಗಾರ್ಡ್‍ನರ್ ಮರ್ಫಿಗೆ(ಜ1895) ಸಲ್ಲಬೇಕು. ಫ್ಲಾಡ್ ಹೆಚ್. ಆಲ್ ಪೊರ್ಟ್‍ನ (ಜ.1890) ಸೋಶಿಯಲ್ ಸೈಕಾಲಜಿ (1924) ಗ್ರಂಥ, ಲೂಯಿಸ್ ಲಿಯಾನ್ ತಸ್ರ್ಟನ್ ರೂಪಿಸಿದ ಸಾಮಾಜಿಕ ಮನೋಧೋರಣೆಗಳನ್ನು ಅಧ್ಯಯನ ಮಾಡುವ ವಿಧಾನಗಳು, ಇಮೊರಿ ಸ್ಟೀಫನ್ ಬೊಗಾರ್ಡಸ್ (ಜ.1882) ರೂಪಿಸಿದ ಸಾಮಾಜಿಕ ದೂರ ಅಳತೆ ಮಾಡುವ ವಿಧಾನ, ರೆನ್ಸಿಸ್ ಲಿಕರ್ಟ್‍ನ (ಜ. 1903) ಒಡಗೂಡಿ ಮರ್ಫಿ ರೂಪಿಸಿದ ಮನೋಧೋರಣೆಯ ಮಾಪಕ ಅರ್ಥಾತ್ ದ ಲೀಕರ್ಟ್‍ಟೆಕ್ನಿಕ್ ಇವೆ ಮೊದಲಾದವು ಸಾಮಾಜಿಕ ಮನೋವಿಜ್ಞಾನ ವಿಜ್ಞಾನಗಳ ಸಾಲಿಗೆ ಸೇರಲು ಕಾರಣವಾದವು.
ಪ್ರಾಯೋಗಿಕ ಮನೋವಿಜ್ಞಾನದ ಡೀನ್ ಎಂದು ಹೆಸರಾದ ಎಡ್ವರ್ಡ್‍ಬ್ರಾಡ್ ಫರ್ಡ್ ಟಿಚನರ್ (1867-1927) ವೂಂಟ್‍ನ ಸಂಪ್ರದಾಯವನ್ನು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿ ಸಂರಚನವಾದದ ಬೆಳವಣಿಗೆಗೆ ಕಾರಣನಾದ. ಅಂತರ್ವೀಕ್ಷಣೆಯನ್ನು ಮನೋವೈಜ್ಞಾನಿಕ ಪದ್ಧತಿಯಾಗಿ ಸ್ಥಾಪಿಸಲು ಹೆಣಗಾಡಿದವರಲ್ಲಿ ಇವನೂ ಒಬ್ಬ. ಪ್ರಾಯೋಗಿಕ, ವಿಭೇದಾತ್ಮಕ, ಸಂಖ್ಯಾಶಾಸ್ತ್ರೀಯ ಮನೋವಿಜ್ಞಾನಿಗಳ ಬೆಳವಣಿಗೆಗೆ ಬುದ್ಧಿಶಕ್ತಿಯ ಸಂರಚನೆಯ ಮಾದರಿಯ ನಿರ್ಮಾಣಕ್ಕೆ ಅದ್ವಿತೀಯ ಕೊಡುಗೆ ನೀಡಿದ ಜಾಯ್ ಪಾಲ್ ಗಿಲ್‍ಫರ್ಡ್ (ಜ.1807) ಟಿಚನರ್‍ನ ಸಂಪ್ರದಾಯದಲ್ಲಿ ವಿಕಸಿಸಿದವ. ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನದ ಕಾರ್ಯಾತ್ಮಕ ಪಂಥ ನೆಲಸಲು ಕಾರಣರಾದವರ ಪೈಕಿ ಇವರು ಅಗ್ರಗಣ್ಯರು- ಜನ್ ಡ್ಯೂಯಿ (1859-1952). ಸಾಮಾಜಿಕ ವರ್ತನ ಪಂಥದಶಿಲ್ಪಿ ಜಾರ್ಜ್‍ಹರ್ಬರ್ಟ್ ಮೀಡ್ (1863-1931). ಕಾರ್ಯಾತ್ಮಕವಾದದ ಮೂಲ ಆಧಾರ ವಾಕ್ಯ(ಪಾಶ್ಚುಲೇಟ್ಸ್) ರೂಪಿಸಿದ ಜೇಮ್ಸ್ ರೊಲ್ಯಾಂಡ್ ಏಂಜೆಲ್(1869-1949). ಕಾರ್ಯಾತ್ಮಕವಾದ ಅಮೆರಿಕದಲ್ಲಿ ವರ್ತನವಾದದ ರೂಪು ತಳೆಯಲು ಕಾರಣನಾದವ ಜಾನ್ ಬಿ. ವಾಟ್ಸನ್ (1878-1958). ವರ್ತನವಾದದ ಪ್ರಬಲ ಪ್ರವರ್ತಕನಾದ್ದರಿಂದ ಈತ ಉಲ್ಲೇಖಾರ್ಹ ವ್ಯಕ್ತಿ.

ಮನೋವಿಜ್ಞಾನದ ಇತಿಹಾಸದಲ್ಲಿ, ರಷ್ಯಾದ ಇವಾನ್ ಪೆಟ್ರೋವಿಚ್ ಪಾವಲೋ (1849-1936) ವರ್ತನವಾದದ ಬೆಳವಣಿಗೆಗೆ ಕಾರಣನಾದ ಪ್ರಧಾನ ವ್ಯಕ್ತಿ ಎಂಬುದರಿಂದ ಸ್ಥಾನ ಪಡೆಯುತ್ತಾನೆ. ಈತ ರೂಪಿಸಿದ ಸೋಪಾಧಿಕ ಪ್ರತಿವರ್ತಿ ಅಥವಾ ಅಭಿಜಾತ ಅನುಬಂಧನ ವರ್ತನವಾದದ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದ್ದಲ್ಲದೆ, ಇಂದೂ ಅನುಯಾಯಿಗಳನ್ನು ಹೊಂದಿದೆ.
ಇದು ಮನೋವಿಜ್ಞಾನ ನಡೆದು ಬಂದ ದಾರಿಯ ಸ್ಥೂಲ ಚಿತ್ರಮಾತ್ರ. ವಾಸ್ತವವಾಗಿ ಎಷ್ಟು ಮನೋವಿಜ್ಞಾನಿಗಳು ಇರುವರೋ ಅಷ್ಟು ಮನೋವಿಜ್ಞಾನದ ಪ್ರಭೇದಗಳನ್ನು ಗುರುತಿಸಲು ಸಾಧ್ಯ. ಪ್ರತಿಯೊಬ್ಬನೂ ಒಂದಲ್ಲ ಒಂದು ರೀತಿಯಲ್ಲಿ ಮನೋವಿಜ್ಞಾನದ ಬೆಳವಣಿಗೆಗೆ ತನ್ನ ಸೇವೆ ಸಲ್ಲಿಸಿದ್ದಾನೆ.

ಭವಿಷ್ಯ : ಇಂದಿನ ಮನೋವಿಜ್ಞಾನದಲ್ಲಿ ಎಲ್ಲ ಪ್ರಶ್ನೆಗಳಿಗೆ ಖಚಿತ ಉತ್ತರ ಸಿಗುವುದಿಲ್ಲ. ಎಷ್ಟೋ ಕಾರ್ಯನಿರ್ವಹಣೆಗೆ ಯುಕ್ತವಾದ ತಾತ್ಕಾಲಿಕ ಉತ್ತರಗಳನ್ನು (ವರ್ಕಿಂಗ್ ಹೈಪಾತಿಸಿಸ್) ಆಧಾರವಾಗಿ ಇಟ್ಟುಕೊಂಡು ಮುಂದುವರೆಯಲು ಯತ್ನಿಸಲಾಗುತ್ತಿದೆ. ಮನಸ್ಸು ದೇಹ ಸಂಬಂಧ ಇನ್ನೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಜೀವನದ ವಿವಿಧ ಕ್ಷೇತ್ರಗಳಲ್ಲಿ (ಉದಾಹರಣೆಗೆ ಶಿಕ್ಷಣ, ಮನೋರೋಗ ಚಿಕಿತ್ಸೆ ಇತ್ಯಾದಿ) ಪ್ರಯೋಗ ಮುಖೇನ ಸಾಧಿಸಲ್ಪಟ್ಟ, ಹೆಚ್ಚು ಭರವಸೆ ಇರುವ ತತ್ತ್ವಗಳನ್ನು ಉಪಯೋಗಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಮಾನಸಿಕ ಪರೀಕ್ಷೆಗಳು ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಪ್ರಧಾನ ಪಾತ್ರವಹಿಸುತ್ತಿವೆ. ಪಂಥಗಳ ವ್ಯಾಮೋಹ ಕಡಿಮೆ ಆಗಿ ಉಪಯುಕ್ತತೆಯ ಬಗ್ಗೆ ಕಾಳಜಿ, ನಿರ್ದಿಷ್ಟ ಸಮಸ್ಯೆಗಳ ಪರಿಹಾರದತ್ತ ಒಲವು ಕಾಣುತ್ತಿದೆ. ಭವಿಷ್ಯದಲ್ಲಿ ಮನೋವಿಜ್ಞಾನ, ಭೌತವಿಜ್ಞಾನ, ಸ್ವಾಭಾವಿಕ ವಿಜ್ಞಾನಗಳಿಗೆ ಸಹಜವಾದದ ಅಧ್ಯಯನ ವಿಧಾನಗಳನ್ನು ಕ್ರೋಢಿಕರಿಸಿ, ಇತರ ವಿಜ್ಞಾನಗಳ ಸಂಶೋಧನೆಗಳ ಸಹಾಯ ಪಡೆದು, ವರ್ತನೆಯ ಸುಧಾರಣೆ, ಶಿಕ್ಷಣ, ಮನೋರೋಗಚಿಕಿತ್ಸೆ, ಔದ್ಯೋಗಿಕ ಕ್ಷೇತ್ರಗಳಿಗೆ ಯುಕ್ತ ವ್ಯಕ್ತಿಗಳ ಆಯ್ಕೆ, ಉದ್ಯಮಗಳಲ್ಲಿ ಮಾನವ ಸಂಪನ್ಮೂಲದ ಯುಕ್ತ ಬಳಕೆ ಇವೇ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಯುಕ್ತ ಪರಿಹಾರ ಸೂಚಿಸುವ ಸಾಧ್ಯತೆ ಇದೆ.
(ಎ.ವಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ